ನವದೆಹಲಿ:ನಗರಗಳಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮತ್ತು ದೇಶಾದ್ಯಂತ ಇರುವ ಬಡವರಿಗೆ ಸಹಾಯ ಮಾಡಲು ಮನ್ರೇಗಾ ಮತ್ತು ನ್ಯಾಯ್ ನಂತಹ ಯೋಜನೆಗಳನ್ನ ಕಾರ್ಯಗತಗೊಳಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (MGNREGA) ತನ್ನ ವ್ಯಾಪ್ತಿಯ ವಿಸ್ತರಿಸುವ ಅವಶ್ಯಕತೆ ಇದೆ. ಹಾಗೆಯೇ ಬಡ ಜನರಿಗೆ ನೆರವಾಗಲು ನ್ಯಾಯ್ (NYAY-Nyuntam Aay Yojana) - ಈ ಎರಡು ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಸದ್ಯದ ಅವಶ್ಯಕತೆಯಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ಯೋಜನೆಗಳನ್ನು ಕಾರ್ಯಗತಗೊಳಿಸುವುದರಿಂದ ಆರ್ಥಿಕತೆ ಸುಧಾರಿಸುತ್ತದೆ. ಸೂಟು - ಬೂಟು - ಲೂಟಿ ಸರ್ಕಾರಕ್ಕೆ ಬಡವರ ನೋವು ಅರ್ಥಮಾಡಿಕೊಳ್ಳಲು ಸಾಧ್ಯವೇ? ಎಂದು ಕೇಳಿರುವ ರಾಗಾ, ಮನ್ರೇಗಾ ಬೇಡಿಕೆ ಹೆಚ್ಚಳದ ಕುರಿತ ಗ್ರಾಫ್ ಒಂದನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ, ಬಡವರಿಗೆ ಸಹಾಯ ಮಾಡಲು ಎಲ್ಲರ ಜನ ಧನ್, ಪಿಎಂ - ಕಿಸಾನ್ ಹಾಗೂ ಪಿಂಚಣಿ ಖಾತೆಗಳಿಗೆ 7,500 ರೂ. ಹಣ ಜಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯಿಸಿತ್ತು ಎಂದರು. 2019 ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಯ್ ಯೋಜನೆಯನ್ನು ಜಾರಿಗೆ ತರುವ ಭರವಸೆಯನ್ನ ಕಾಂಗ್ರೆಸ್ ನೀಡಿತ್ತು. ನ್ಯಾಯ್- ಬಡಜನರ ಖಾತೆಗಳಿಗೆ ಪ್ರತಿವರ್ಷ 72 ಸಾವಿರ ರೂ. ಹಣ ಜಮೆ ಮಾಡುವುದಾಗಿ ಘೋಷಿಸಿತ್ತು.