ನವದೆಹಲಿ : ಕೊರೊನಾ ವೈರಸ್ ಮತ್ತು ಆಂಫಾನ್ ಚಂಡಮಾರುತ ಇವೆರಡರ ವಿರುದ್ಧ ಹೋರಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸರ್ವ ಸನ್ನದ್ಧವಾಗಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಆಂಫಾನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಎರಡು ರಾಜ್ಯಗಳ ಕರಾವಳಿ ತೀರದಲ್ಲಿ ಎನ್‌ಡಿಆರ್‌ಎಫ್‌ನ 30 ವಿಶೇಷ ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಎನ್‌ಡಿಆರ್‌ಎಫ್ ಡಿಐಜಿ ರಣದೀಪ್ ರಾಣಾ, ಎಲ್ಲಾ 30 ತಂಡಗಳ ಸದಸ್ಯರು ಚಂಡಮಾರುತ ಸಮಯದಲ್ಲಿ ಕೋವಿಡ್ನ್ನು ಹೇಗೆ ನಿರ್ವಹಣೆ ಮಾಡಬೇಕೆಂಬುವುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಎನ್‌ಡಿಆರ್‌ಎಫ್ ಡಿಐಜಿ ರಣದೀಪ್ ರಾಣಾ ಜೊತೆ ಈಟಿವಿ ಭಾರತ ಮಾತುಕತೆ ಆಂಫಾನ್ ಅತ್ಯಂತ ವೇಗವಾಗಿ ಮತ್ತು ತೀವ್ರವಾಗಿ ಬೀಸುವ ಚಂಡಮಾರುತ ಎಂದು ಪರಿಗಣಿಸಲಾಗಿದ್ದು, ಮೇ 20ರಂದು ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಚಂಡಮಾರುತವೂ ಸಾಕಷ್ಟು ಹಾನಿ ಮಾಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ವಿವಿಧ ಕಡೆಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಚಂಡಮಾರುತ 220 ರಿಂದ 230 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದಿದ್ದಾರೆ.