ಪಾಟ್ನಾ (ಬಿಹಾರ):ಎನ್‌ಡಿಎ ಆಳ್ವಿಕೆಯಲ್ಲಿ ಬಿಹಾರವು 'ಜಂಗಲ್ ರಾಜ್'ನಿಂದ 'ಜನತಾ ರಾಜ್' ಆಗಿ ಬದಲಾಗಿದೆ. ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತ ಪಡೆಯುವ ವಿಶ್ವಾಸ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವರ್ಚುವಲ್ ರ‍್ಯಾಲಿಯ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಬಿಹಾರದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯದ ಅಭಿವೃದ್ಧಿ ದರ ಕೇವಲ 3.9 ರಷ್ಟಿತ್ತು, ಆದರೆ ಎನ್‌ಡಿಎ ಅಡಿಯಲ್ಲಿ ಶೇ 11.3 ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯವು 'ಲಾಟೀನ್ ರಾಜ್ಯ'ದಿಂದ 'ಎಲ್ಇಡಿ ರಾಜ್ಯ'ವಾಗಿ ಬದಲಾಗಿದೆ ಎಂದು ಆರ್ಜೆಡಿ ಚಿಹ್ನೆಯನ್ನು(ಲಾಟೀನ್) ಉಲ್ಲೇಖಿಸಿ ಕಾಲೆಳೆದಿದ್ದಾರೆ. ಬಿಹಾರದ ಭೂಮಿ ಪ್ರಜಾಪ್ರಭುತ್ವವನ್ನು ಜಗತ್ತಿಗೆ ಪರಿಚಯಿಸಿತ್ತು. ಮಹಾ ಮಗಧ ಸಾಮ್ರಾಜ್ಯವನ್ನು ಇಲ್ಲಿ ಸ್ಥಾಪಿಸಲಾಯಿತು. ಇದು ಬುದ್ಧ, ಮಹಾವೀರ, ಚಂದ್ರಗುಪ್ತ ಮತ್ತು ಚಾಣಕ್ಯರ ಭೂಮಿ ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಬಾಬು ಜಗಜೀವನ್ ರಾಮ್, ಜೈ ಪ್ರಕಾಶ್ ನಾರಾಯಣ್, ಶ್ರೀ ಬಾಬು ಮುಂತಾದವರ ಕೊಡುಗೆಯನ್ನು ನಾವು ಹೇಗೆ ಮರೆಯಲು ಸಾಧ್ಯ . ಸ್ವಾತಂತ್ರ್ಯದ ನಂತರವೂ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ, ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸಲು ಜೆಪಿ ಅವರ ನಾಯಕತ್ವದಲ್ಲಿ ಬಿಹಾರದ ಹೋರಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.