ನವದೆಹಲಿ:ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೇರಿದಂತೆ ಬಿಜೆಪಿ ನೇತೃತ್ವದ ಎನ್ಡಿಎ ವರಿಷ್ಠರು ದೆಹಲಿಯಲ್ಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.
ಫಲಿತಾಂಶ ಹೊರಬೀಳುವ ಎರಡು ದಿನಗಳ ಮೊದಲೇ ಸಭೆ ನಡೆಯುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಮೋದಿ ಮತ್ತು ಶಾ ಜೊತೆಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಶಿವ ಸೇನ ವರಿಷ್ಠ ಉದ್ಧವ್ ಠಾಕ್ರೆ, ಲೋಕ್ ಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಸೇರಲಿದ್ದಾರೆ.
ಬಹುತೇಕ ಸಮೀಕ್ಷಾ ವರದಿಗಳು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ. ಕೆಲವು ಸಮೀಕ್ಷೆಗಳು ಬಿಜೆಪಿ ಮ್ಯಾಜಿಕ್ ನಂಬರ್ ಸನಿಹಕ್ಕೆ ಬರಲಿದೆ. ಆದರೆ, 272 ಸ್ಥಾನ ತಲುಪಲು ಎನ್ಡಿಎ ಮಿತ್ರ ಪಕ್ಷಗಳ ಬೆಂಬಲ ಅವಶ್ಯವಿದೆ ಎಂದು ಭವಿಷ್ಯ ನುಡಿದಿವೆ. ಎನ್ಡಿಎಗೆ ಈ ಎಲ್ಲ ವಿದ್ಯಾಮಾನಗಳ ಕುರಿತು ಚರ್ಚಿಸಲು ಬಿಜೆಪಿ ಕಚೇರಿ ವೇದಿಕೆಯಾಗಲಿದೆ.
ಓಡಿಶಾದಲ್ಲಿ ಬಿಜೆಡಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ಹೇಳಿವೆ. 'ವಿಶೇಷ ಸ್ಥಾನಮಾನದ ನಮ್ಮ ಬೇಡಿಕೆಯನ್ನು ಬೆಂಬಲಿಸುವ ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತೇವೆ' ಎಂದು ಬಿಜು ಜನತಾ ದಳ (ಬಿಜೆಡಿ) ತಿಳಿಸಿದೆ. ಜೊತೆಗೆ ಉತ್ತರ ಪ್ರದೇಶದ ಉಚ್ಚಾಟಿತ ಸಚಿವ ಓಂ ಪ್ರಕಾಶ್ ರಾಜ್ಭಾರ್ ಅವರನ್ನು ಪಕ್ಷಕ್ಕೆ ಕರೆತರುವ ಕಸರತ್ತು ಸಿಎಂ ಯೋಗಿ ತೆರೆಮರೆಯಲ್ಲಿ ನಡೆಸಿದ್ದಾರೆ. ಎನ್ಡಿಎ ಸಖ್ಯ ತೊರೆದ ಪಕ್ಷಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.