ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಗರ್ಗಿ ಕಾಲೇಜಿನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಕಾಲೇಜಿಗೆ ಭೇಟಿ ನೀಡಿದೆ.
ಶನಿವಾರ ಮದ್ಯಪಾನ ಮಾಡಿದ್ದ ಕೆಲವು ವ್ಯಕ್ತಿಗಳು ಮಹಿಳಾ ಕಾಲೇಜು ಆವರಣಕ್ಕೆ ಪ್ರವೇಶಿಸಿ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಅಲ್ಲದೆ ಅವರನ್ನು ಸಿಎಎ ಪರ ಪ್ರತಿಭಟನಾಕಾರರು ಎಂದು ಹೇಳಲಾಗಿದೆ.
ಕಾಲೇಜಿನಲ್ಲಿ ನಡೆದ ವಾರ್ಷಿಕ ಉತ್ಸವ 'ರೆವೆರಿ'ಯ 3ನೇ ದಿನದಂದು ಮದ್ಯಪಾನ ಮಾಡಿದ್ದ ಪುರುಷರ ಗುಂಪು ಕಾಲೇಜಿಗೆ ಪ್ರವೇಶಿಸಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದೂ ಆರೋಪಿಸಿದ್ದಾರೆ.
ಅಂದು ಕಾಲೇಜಿಗೆ ನುಗ್ಗಿದ್ದ ಪಾನಮತ್ತ ವ್ಯಕ್ತಿಗಳ ಗುಂಪು ಹೆಣ್ಣು ಮಕ್ಕಳನ್ನು ವಾಶ್‌ರೂಮ್‌ಗಳಲ್ಲಿ ಕೂಡಿ ಹಾಕಿದ್ದರು. ಹತ್ತಿರದ ಗ್ರೀನ್ ಪಾರ್ಕ್ ಮೆಟ್ರೋವರೆಗೂ ನಮ್ಮನ್ನ ಹಿಂಬಾಲಿಸಿ, ಕೀಟಲೆ ಮಾಡಿದ್ದಲ್ಲದೆ ವಾರ್ಷಿಕ ಹಬ್ಬದ ಸಮಯದಲ್ಲಿ ಕೆಟ್ಟದಾಗಿ ವರ್ತಿಸಿದ್ದರು ಎಂದು ಗರ್ಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಸರೇಳಲು ಇಚ್ಛಿಸದ ವಿದ್ಯಾರ್ಥಿನಿ, ಲೈಂಗಿಕ ಕಿರುಕುಳದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಪಾನಮತ್ತ ವ್ಯಕ್ತಿಗಳು ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದು ಸತ್ಯ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗರ್ಗಿ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರಮಿಳಾ ಕುಮಾರ್, ಕ್ಯಾಂಪಸ್‌ನಲ್ಲಿ ನಡೆದ ಲೈಂಗಿಕ ಕಿರುಕುಳದ ಬಗ್ಗೆ ದೂರುದಾರರು, ಪ್ರತ್ಯಕ್ಷದರ್ಶಿಗಳು ಮತ್ತು ಇತರ ಯಾವುದೇ ವ್ಯಕ್ತಿಗಳನ್ನು ಭೇಟಿ ಮಾಡಲು ಉನ್ನತಮಟ್ಟದ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.
ಕಾಲೇಜು ಅಧಿಕಾರಿಗಳು ಈ ಸಂಬಂಧ ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹೆಚ್ಚುವರಿ ಡಿಸಿಪಿ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ದಕ್ಷಿಣ ವಲಯ ಡಿಸಿಪಿ ಅತುಲ್ ಠಾಕೂರ್ ಮಾಹಿತಿ ನೀಡಿದ್ದಾರೆ.