ಕರ್ನಾಟಕ

karnataka

ETV Bharat / bharat

ಸಾಮಾಜಿಕ ಕರ್ಪ್ಯೂ ಪರಿಣಾಮ: ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಹೆಚ್ಚಳ - ರಾಷ್ಟ್ರೀಯ ಮಹಿಳಾ ಆಯೋಗ

ಲಾಕ್​ಡೌನ್​ ಅವಧಿಯಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ತಡೆಗೆ ಮಹಿಳಾ ಆಯೋಗ ಮುಂದಾಗಿದ್ದು, ಹಲವಾರು ಕ್ರಮಗಳನ್ನು ಪ್ರಕಟಿಸಿದೆ.

NCW sets up special team
NCW sets up special team

By

Published : Apr 9, 2020, 6:50 PM IST

ಹೊಸದಿಲ್ಲಿ: ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ ಕೌಟುಂಬಿಕ ಜೀವನದ ಮೇಲೂ ಹಲವಾರು ರೀತಿಯ ಕರಾಳ ಪರಿಣಾಮ ತೋರಿಸಲಾರಂಭಿಸಿದೆ. ಲಾಕ್​ಡೌನ್​ ಅವಧಿಯಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

ಮಹಿಳೆಯರಿಗೆ ಗಂಡಂದಿರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಹಾಗೂ ನಿಂದಿಸುವ ಪ್ರಕರಣಗಳು ವಿಶೇಷವಾಗಿ ಹೆಚ್ಚಾಗುತ್ತಿವೆ ಎಂದು ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ತಡೆಗೆ ಮಹಿಳಾ ಆಯೋಗ ಮುಂದಾಗಿದ್ದು, ಹಲವಾರು ಕ್ರಮಗಳನ್ನು ಪ್ರಕಟಿಸಿದೆ.

ಲಾಕ್​ಡೌನ್​ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆಗಾಗಿ ಮೀಸಲಾದ ಸಮಿತಿಯೊಂದನ್ನು ಆಯೋಗ ರಚಿಸಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಹೆಲ್ಪ್‌ ಡೆಸ್ಕ್​ ರಚಿಸಲಾಗಿದ್ದು, ಸಂತ್ರಸ್ತ ಮಹಿಳೆಯರು ‘help@ncw@gmail.com’ ಇ-ಮೇಲ್​ ಐಡಿಗೆ ನೇರವಾಗಿ ದೂರು ನೀಡಬಹುದು.

"ರಾಷ್ಟ್ರೀಯ ಮಹಿಳಾ ಆಯೋಗ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆಗೆ ವಿಶೇಷ ತಂಡವನ್ನು ರಚಿಸಿದೆ. ಪೊಲೀಸರೂ ನಮ್ಮ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಲಾಕ್​ಡೌನ್​ ಸಮಸ್ಯೆಯಿಂದ ಕೆಲ ಮಹಿಳೆಯರಿಗೆ ತಮ್ಮ ಕುಟುಂಬವನ್ನು ಸೇರಿಕೊಳ್ಳಲಾಗುತ್ತಿಲ್ಲ. ಇಂಥ ಸಂದರ್ಭಗಳಲ್ಲಿ ಮಾನಸಿಕ ಖಿನ್ನತೆಗೊಳಗಾಗುವ ಮಹಿಳೆಯರ ಸಹಾಯಕ್ಕಾಗಿ 'ಸಖಿ' ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿ ಎನ್​ಜಿಓಗಳ ಸಹಾಯ ಪಡೆಯಲಾಗುವುದು." ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ.

"ಮಾ.24 ರಿಂದ ಏ.7 ರ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಸೈಬರ್ ಕ್ರೈಂ ಸೇರಿದಂತೆ 329 ದೂರು ಬಂದಿವೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಾದ ದೆಹಲಿ, ಪಂಜಾಬ್, ಹರಿಯಾಣ ಹಾಗೂ ಬಿಹಾರ ರಾಜ್ಯಗಳಿಂದ ಹೆಚ್ಚು ದೂರು ದಾಖಲಾಗಿವೆ." ಎಂದು ರೇಖಾ ಶರ್ಮಾ ಹೇಳಿದ್ದಾರೆ.

ABOUT THE AUTHOR

...view details