ಛಾತ್ರಾ (ಜಾರ್ಖಂಡ್): ಕಲ್ಲಿದ್ದಲು ಲೋಡ್ ಮಾಡುತ್ತಿದ್ದ ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಜಾರ್ಖಂಡ್ನ ಛಾತ್ರಾ ಜಿಲ್ಲೆಯಲ್ಲಿ ನಡೆದಿದೆ.
ವಾಹನಗಳನ್ನು ಸುಟ್ಟು ನಕ್ಸಲರ ಅಟ್ಟಹಾಸ - ಜಾರ್ಖಂಡ್ನಲ್ಲಿ ನಕ್ಸಲರ ಗುಂಡಿನ ದಾಳಿ
ಸಿಸಿಎಲ್ ಸಿಬ್ಬಂದಿ ಹಾಗೂ ಕಾರ್ಮಿಕರು ಕಲ್ಲಿದ್ದಲು ಲೋಡಿಂಗ್‌ನಲ್ಲಿ ತೊಡಗಿರುವ ವೇಳೆ ಗುಂಡು ಹಾರಿಸಿದ ನಕ್ಸಲರ ಗುಂಪು, ವಾಹನಗಳನ್ನು ಸುಟ್ಟು ಪರಾರಿಯಾಗಿದ್ದಾರೆ.
ಛಾತ್ರಾದ ಬಚ್ರಾ ರೈಲ್ವೆ ನಿಲ್ದಾಣದ ಸಮೀಪ ಸಿಸಿಎಲ್ (ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್) ಸಿಬ್ಬಂದಿ ಹಾಗೂ ಕಾರ್ಮಿಕರು ಕಲ್ಲಿದ್ದಲು ಲೋಡಿಂಗ್‌ನಲ್ಲಿ ತೊಡಗಿರುವ ವೇಳೆ ನಕ್ಸಲರ ಗುಂಪೊಂದು ವಾಹನಗಳ ಮೇಲೆ ಗುಂಡು ಹಾರಿಸಿದೆ. ತಕ್ಷಣವೇ ಸಿಸಿಎಲ್ ಸಿಬ್ಬಂದಿ ಹಾಗೂ ಕಾರ್ಮಿಕರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ನಕ್ಸಲರು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು, ಪರಾರಿಯಾಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರ ತಂಡ ಬೆಂಕಿ ನಂದಿಸಿದ್ದು, ಘಟನೆಯಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ. ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ (PLFI) ನಕ್ಸಲರು ಕೃತ್ಯೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಇವರು ಈ ಹಿಂದೆ ಕೂಡ ಗೋದಾಮಿನ ಮೇಲೆ ಬಾಂಬ್ ಎಸೆದು ಜನರಲ್ಲಿ ಆತಂಕ ಸೃಷ್ಟಿಸಿದ್ದರು ಎಂದು ಛಾತ್ರಾ ಎಸ್ಪಿ ರಿಷಭ ಜ್ಹಾ ತಿಳಿಸಿದ್ದಾರೆ.