ಚಂಡೀಗಢ:ಸಿಎಂ ಜತೆ ಜಟಾಪಟಿ ನಡೆಸಿ ಪ್ರಮುಖ ಖಾತೆ ಕಳೆದುಕೊಂಡಿದ್ದ ನವಜೋತ್ ಸಿಂಗ್ ಸಿಧು, ಇದೀಗ ತಮಗೆ ಸೂಚಿಸಲಾಗಿದ್ದ ಸಚಿವ ಸ್ಥಾನವನ್ನು ಅಲಂಕರಿಸುವ ಮುನ್ನವೇ ರಾಜೀನಾಮೆ ನೀಡಿದ್ದನ್ನು ಬಹಿರಂಗಪಡಿಸಿದ್ದಾರೆ.
ಕಳೆದ ತಿಂಗಳು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಕಳಿಸಿದ್ದ ಸಿಧು, ಟ್ವಿಟರ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪತ್ರದಲ್ಲಿ, ನನಗೆ ನೀಡಲಾದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಹಸ್ತಾಕ್ಷರದಲ್ಲಿ ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಈ ಪತ್ರವನ್ನು ಸಿಎಂಗೆ ಸಹ ಕಳುಹಿಸುವುದಾಗಿ ಬರೆದುಕೊಂಡಿದ್ದಾರೆ.
ಕಳೆದ ತಿಂಗಳು ರಾಹುಲ್ ಅವರನ್ನು ಭೇಟಿ ಮಾಡಿದ್ದ ವೇಳೆ ಟ್ವೀಟ್ ಮಾಡಿದ್ದ ಸಿಧು, ಅಧ್ಯಕ್ಷರನ್ನು ಭೇಟಿ ಮಾಡಿದ್ದೆನು. ಅವರಿಗೆ ಪತ್ರ ನೀಡಿ, ಪರಿಸ್ಥಿತಿ ಏನೆಂದು ವಿವರಿಸಿದ್ದೇನೆ ಎಂದಷ್ಟೇ ಬರೆದುಕೊಂಡಿದ್ದರು.
ಲೋಕಸಭೆ ಚುನಾವಣೆ ವೇಳೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ವೈಮನಸ್ಸು ಮೂಡಿತ್ತು. ಸಿಎಂ ವಿರುದ್ಧ ಹೇಳಿಕೆ ನೀಡುತ್ತಿದ್ದ ಸಿಧುಗೆ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಬದಲು ಇಂಧನ ಹಾಗೂ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಖಾತೆ ನೀಡಲಾಗಿತ್ತು. ಅಂದಿನಿಂದಲೂ ಸಿಧು ಈ ಬಗ್ಗೆ ಅಸಮಾಧಾನ ಹೊಂದಿದ್ದರು. ಪರಿಣಾಮ ಸಚಿವ ಸಂಪುಟದಿಂದಲೇ ಅವರು ಹೊರಬರಲು ನಿರ್ಧರಿಸಿದ್ದಾರೆ.