ಮುಂಬೈ (ಮಹಾರಾಷ್ಟ್ರ): ಮುಂಬೈನ ತಲೋಜಾ ಪ್ರದೇಶದ ಮನೆಯಲ್ಲಿ 35 ವರ್ಷದ ಆನ್‌ಲೈನ್ ವ್ಯಾಪಾರಿ, ಅವರ ಪತ್ನಿ ಮತ್ತು ಅಪ್ರಾಪ್ತ ಮಗ ಮತ್ತು ಮಗಳ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿತೇಶ್ ಉಪಾಧ್ಯಾಯ, ಅವರ ಪತ್ನಿ ಬಬ್ಲಿ (30) ಮತ್ತು ಅವರ ಎಂಟು ವರ್ಷದ ಮಗಳು ಮತ್ತು ಏಳು ವರ್ಷದ ಮಗನ ಮೃತದೇಹಗಳು ತಾಲೋಜ ಸೆಕ್ಟರ್ 9ರ ಶಿವ ಕಾರ್ನರ್ ಕಟ್ಟಡದಲ್ಲಿ ಕಂಡುಬಂದಿವೆ. ಮನೆ ಮಾಲೀಕ ರಾಜೇಂದ್ರ ಭಾರದ್ವಾಜ್ ಅವರು ಬಾಡಿಗೆ ಹಣ ಸಂಗ್ರಹಿಸಲು ಬಂದಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾರದ್ವಾಜ್ ಅವರು ಬಾಗಿಲು ಬಡಿದ ನಂತರ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಸತಿ ಸಂಘದ ಅಧ್ಯಕ್ಷರ ಬಳಿಗೆ ಹೋಗಿ ನಕಲಿ ಬೀಗದ ಕೀ ಬಳಸಿ ಮನೆ ಬಾಗಿಲು ತೆರೆದಿದ್ದಾರೆ. 'ನಿತೇಶ್ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಉಳಿದ ಮೂವರನ್ನು ಕತ್ತು ಹಿಸುಕಿ ಕೊಲೆಗೈದಿರುವುದು ಕಂಡುಬಂದಿದೆ. ಸ್ಥಳದಲ್ಲೇ ದೊರೆತ ಆತ್ಮಹತ್ಯೆ ಪತ್ರದಲ್ಲಿ 'ಚಿನ್ನ ಮತ್ತು ನಗದು ಮಲಗುವ ಕೋಣೆಯಲ್ಲಿ ಇಡಲಾಗಿದೆ, ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಸುವಂತೆ ಪತ್ರದಲ್ಲಿ ಬರೆದಿದ್ದಾರೆ. ಎಂದು ಅಧಿಕಾರಿ ತಿಳಿಸಿದ್ದಾರೆ.
'ನಾವು ನಿತೇಶ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದೇವೆ, ಏಕೆಂದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಇತರರನ್ನು ಕತ್ತು ಹಿಸುಕಿ ಕೊಂದಿದ್ದಾರೆಂದು ಭಾವಿಸುತ್ತೇವೆ. ಅಲ್ಲದೆ ಘಟನೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ತನಿಖೆ ನಡೆಸುತ್ತಿದ್ದೇವೆ' ಎಂದು ಪೊಲೀಸರು ತಿಳಿಸಿದ್ದಾರೆ.