ನವದೆಹಲಿ:ದೇಶಾದ್ಯಂತ ವಿವಿಧ ಶಕ್ತಿ ದೇವತೆಗಳ ಆರಾಧನೆಯ ಹಬ್ಬ ನವರಾತ್ರಿ ಆರಂಭಗೊಂಡಿದೆ. ದೇಶದ ಮೂಲೆ ಮೂಲೆಗಳ ವಿವಿಧ ದೇವಾಲಯಗಲ್ಲಿ ಇಂದು ಬೆಳಗ್ಗೆಯಿಂದಲೇ ಭಕ್ತರು ವಿಶೇಷ ಪೂಜೆಗಳಲ್ಲಿ ನಿರತರಾಗಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿಯ ಝಾಂದೆವಲನ ದೇವಾಲಯ, ಕಲ್ಕಜಿ ದೇವಾಲಯ, ಮುಂಬೈನ ಮುಂಬಾ ದೇವಿ ದೇವಸ್ಥಾನ, ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಾಲಯ ಸೇರಿದಂತೆ ದೇಶಾದ್ಯಂತ ಮುಂಜಾನೆಯಿಂದಲೇ ಭಕ್ತರು ಸರತಿಯಲ್ಲಿ ನಿಂತು ದರ್ಶನ ಮಾಡಿದರು.
ಪ್ರಧಾನಿ ಶುಭ ಹಾರೈಕೆ:
ನವರಾತ್ರಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ. 'ನಿಮಗೆಲ್ಲ ಶಕ್ತಿ ದೇವತೆಯನ್ನು ಪೂಜಿಸುವ ಪವಿತ್ರ ನವರಾತ್ರಿಯ ಹಬ್ಬದ ಶುಭಾಶಯಗಳು. ತಾಯಿ ದುರ್ಗಾ ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ, ಹೊಸ ಉತ್ಸಾಹ ತುಂಬಲಿ. ಜೈ ಅಂಬೆ ಜಗದಂಬೆ ತಾಯಿ!' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಗಮನ ಸೆಳೆದ ಗರ್ಬಾ ಡ್ಯಾನ್ಸರ್...
ನವರಾತ್ರಿ ಎಂದರೆ ಸುಂದರವಾದ ದಿರಿಸು ಧರಿಸಿ ಕುಟುಂಬದ ಜೊತೆಗೆ 'ಗರ್ಬಾ' ನೃತ್ಯ ಮಾಡುವುದೇ ವಿಶೇಷ. ಹೆಣ್ಣುಮಕ್ಕಳು ಹಬ್ಬದ ಪ್ರತಿದಿನದಂದು ಸೂಕ್ತ ಬಣ್ಣದ ದಿರಿಸಿನೊಂದಿಗೆ ಸಂಭ್ರಮ ಪಡುತ್ತಾರೆ. ಹೀಗೆ ಗುಜರಾತ್ನ ಸೂರತ್ನಲ್ಲಿ ನಡೆದ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡ ಯುವತಿಯರು ತಮ್ಮ ಬೆನ್ನ ಮೇಲೆ ಹಾಕಿಸಿಕೊಂಡಿದ್ದ ವಿಭಿನ್ನ ಚಿತ್ರಗಳಿಂದ ಗಮನ ಸೆಳೆದರು. ಚಂದ್ರಯಾನ 2, 370 ವಿಧಿ ರದ್ಧತಿ ಹಾಗೂ ಮೋಟಾರು ವಾಹನ ಕಾಯ್ದೆಯನ್ನು ಬಿಂಬಿಸುವ ಚಿತ್ರಗಳು ಗಮನ ಸೆಳೆದವು.