ನ್ಯೂಯಾರ್ಕ್:ಕೊರೊನಾ ವೈರಸ್ ಹಾಗೂ ಪ್ರಸ್ತುತ ವಾತಾವರಣದ ಮೂಲಕ ಪ್ರಕೃತಿ ನಮಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ ಎಂದು ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥ ಇಂಗರ್ ಆಂಡರ್ಸನ್ ಅಭಿಪ್ರಾಯ ಪಟ್ಟಿದ್ದಾರೆ. ಮಾನವರು ಹೆಚ್ಚು ಒತ್ತಡವನ್ನು ಭೂಮಿಯ ಮೇಲೆ ಹಾಕುತ್ತಿರುವುದು ಮಾತ್ರವಲ್ಲದೇ ಅಪಾರ ಹಾನಿ ಮಾಡುತ್ತಿದ್ದಾರೆ ಎಂದಿರುವ ಅವರು ಭೂಮಿಯನ್ನು ಉಳಿಸಿಕೊಳ್ಳದಿದ್ದರೆ ನಮ್ಮನ್ನು ನಾವು ಉಳಿಸಿಕೊಳ್ಳುವುದು ಕಷ್ಟ ಎಂದು ಕೂಡಾ ಎಚ್ಚರಿಕೆ ನೀಡಿದ್ದಾರೆ.
ಪ್ರಕೃತಿ ನಮಗೆ ಸ್ಪಷ್ಟ ಸಂದೇಶ ನೀಡುತ್ತಿದೆ: ವಿಶ್ವಸಂಸ್ಥೆ ಪರಿಸರ ವಿಭಾಗದ ಮುಖ್ಯಸ್ಥ
ಕೊರೊನಾ ವೈರಸ್ ಮಾನವಕುಲದ ಸ್ಪಷ್ಟ ಸಂದೇಶ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಮೊದಲು ಕೊರೊನಾ ನಿರ್ಮೂಲನೆಗೆ ಆದ್ಯತೆ ನೀಡಿ ಪರಿಸರವನ್ನು ಉಳಿಸುವತ್ತ ಮುಂದಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಶ್ವಸಂಸ್ಥೆ ಪರಿಸರ ವಿಭಾಗದ ಮುಖ್ಯಸ್ಥ ಇಂಗರ್ ಆಂಡರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಆಂಡರ್ಸನ್ ಮಾತನ್ನು ಹಲವು ಪ್ರಸಿದ್ಧ ವಿಜ್ಞಾನಿಗಳು ಸಮರ್ಥನೆ ಮಾಡಿದ್ದಾರೆ. ಕೋವಿಡ್-19 ಮಾನವ ಕುಲಕ್ಕೆ ಸ್ಪಷ್ಟ ಎಚ್ಚರಿಕೆ, ಮುಂದಿನ ಭವಿಷ್ಯದಲ್ಲಿ ಇನ್ನೂ ಭಯಾನಕ ರೋಗಗಳು ಮನುಕುಲಕ್ಕೆ ಒದಗಿ ಬರಲಿವೆ ಎಂದು ಹೇಳಲಾಗುತ್ತಿದೆ. ಈಗಿನ ನಾಗರಿಕತೆ ಬೆಂಕಿಯೊಂದಿಗಿನ ಆಟ ಎಂದೂ ಹೋಲಿಕೆ ಮಾಡಿದ್ದಾರೆ. ಮುಂದಿನ ದುರಂತಗಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸ್ವಾಭಾವಿಕ ಪ್ರಕೃತಿಯನ್ನು ಹಾಳು ಮಾಡುವ ಹಾಗೂ ವನ್ಯಜೀವಿಗಳಿಗೆ ಅಪಾಯ ತಂದೊಡ್ಡುವ ಜಾಗತಿಕ ತಾಪಮಾನ, ಗಣಿಗಾರಿಕೆಯನ್ನು ತಡೆಯಬೇಕೆಂದು ಸೂಚನೆ ನೀಡಲಾಗಿದೆ.
ಕೊರೊನಾ ನಿರ್ಮೂಲನೆ ಹಾಗೂ ಹರಡದಂತೆ ತಡೆಯುವುದು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕು. ನಂತರ ದೀರ್ಘಕಾಲದ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಜೀವವೈವಿಧ್ಯತೆಯನ್ನು ರಕ್ಷಿಸಲು ಮುಂದಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.