“ನಿಸ್ವಾರ್ಥ ಮತ್ತು ತ್ಯಾಗ ಗುಣವನ್ನು ಕಲಿಸುವ ಅತ್ಯುತ್ತಮ ಶಿಕ್ಷಕರೆಂದರೆ ಮರಗಳು”- ಜಂದ್ಯಾಲ ಪಾಪಯ್ಯಶಾಸ್ತ್ರಿ... ಸೇವಾ ಮನೋಭಾವದ, ನಿಸ್ವಾರ್ಥದಿಂದ ನೆರವಾಗುವ ಜೀವಂತ ಉದಾಹರಣೆಯನ್ನು ಯಾರಾದರೂ ನೋಡಬೇಕೆಂದರೆ, ಮರಗಳನ್ನು ಬಿಟ್ಟರೆ ಬಹುಶಃ ಮತ್ಯಾರೂ ಇರಲಿಕ್ಕಿಲ್ಲ. ಈ ಭೂಮಂಡಲದ ಪ್ರತಿಯೊಂದು ಜೀವಿಯೂ ಆಮ್ಲಜನಕ ಸೇವಿಸಿ ಬದುಕಿದೆ. ಅದನ್ನು ನೀಡುತ್ತಿರುವುದೇ ಈ ಮರಗಳು. ಅದೊಂದೇ ಅಲ್ಲ, ಹಣ್ಣುಗಳು, ಎಲೆಗಳು, ಔಷಧಗಳು, ಕಟ್ಟಿಗೆ ಮತ್ತು ಮನುಷ್ಯನಿಗೆ ಬೇಕಾದ ಇನ್ನೂ ಹಲವಾರು ಉಪ ಉತ್ಪನ್ನಗಳನ್ನೂ ಮರಗಳು ನೀಡುತ್ತವೆ. ಆದ್ದರಿಂದ, ಮರಗಳು ಇಲ್ಲದೇ ಹೋಗಿದ್ದರೆ ಜೀವಜಾಲದ ಅಸ್ತಿತ್ವವೇ ಡೋಲಾಯಮಾನವಾಗುತ್ತದೆ ಎಂಬ ಹೇಳಿಕೆಯಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.
ಜೀವ ಮತ್ತು ಪ್ರಕೃತಿಯ ಯಾವುದೇ ಮಾದರಿಗೆ ಪ್ರಾರ್ಥನೆ ಸಲ್ಲಿಸುವಂತಹ ಪಾರಂಪರಿಕ ಪದ್ಧತಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಪುರಾತನ ಕಾಲದ ಪದ್ಧತಿಗಳು ಮತ್ತು ಭಾವನೆಗಳಿಂದ ನಮಗೆ ಬಂದಿರುವಂಥದು ಇದು. ಹಾಗಿದ್ದಾಗ್ಯೂ, ಅತಿ ಹೆಚ್ಚಿನ ಪ್ರಮಾಣದಲ್ಲಿ ಮರಗಳನ್ನು ಕಡಿಯುವ ದೇಶಗಳ ಪೈಕಿ ನಾವೇ ಮೊದಲ ಸ್ಥಾನದಲ್ಲಿರುವುದು ನಿಜಕ್ಕೂ ಆತಂಕಕಾರಿ ಸಂಗತಿ!! ಅಲ್ಲದೇ, ಜನಸಂಖ್ಯೆ ಪ್ರಮಾಣಕ್ಕೆ ಹೋಲಿಸಿದರೆ ಅತಿ ಕಡಿಮೆ ಮರಗಳನ್ನು ಹೊಂದಿರುವ ಪಟ್ಟಿಯಲ್ಲಿಯೂ ನಾವು ತೀರಾ ಕೆಳಗಿನ ಸ್ಥಾನದಲ್ಲಿದ್ದೇವೆ.
ಇಂತಹ ಸಂದರ್ಭದಲ್ಲಿ, “ಗ್ರೀನ್ ಇಂಡಿಯಾ ಚಾಲೆಂಜ್”ನಂತಹ (ಹಸಿರು ಭಾರತ ಸವಾಲು) ಸಂಘಟನೆಗಳಿರುವುದು ನಿಜಕ್ಕೂ ವರದಾನವೇ ಸರಿ. ಪ್ರಸ್ತುತ ಸಂದರ್ಭದ ಅವಶ್ಯಕತೆಗೆ ತಕ್ಕಂತೆ ಜಾಗೃತಿಯನ್ನು ಮೂಡಿಸುವುದರಲ್ಲಿ ಈ ಸಂಘಟನೆ ತೊಡಗಿದ್ದು, ಶಾಲಾ ಮಕ್ಕಳು, ರಾಜಕಾರಣಿಗಳು, ಅಧಿಕಾರಿಗಳು, ಖ್ಯಾತನಾಮರು ಮತ್ತು ಜನಸಾಮಾನ್ಯರೆನ್ನದೇ ಸಮಾಜದ ಎಲ್ಲಾ ವರ್ಗದ ಜನರನ್ನು ಈ ಮಹಾನ್ ಕಾರ್ಯದಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಂಡಿದೆ.
ವಿನಾಶದ ಅಂಚಿನಲ್ಲಿ ಅರಣ್ಯಗಳು
ಭಾರತ ಉಪಖಂಡದ ವಾತಾವರಣ ವೈವಿಧ್ಯಮಯವಾಗಿದ್ದು, ದೇಶದ ಉದ್ದಗಲಕ್ಕೂ ಜೀವ ವೈವಿಧ್ಯತೆ ತುಂಬಿಕೊಂಡಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಹಲವಾರು ವಿಧದ ಪ್ರಾಣಿಗಳು ಮತ್ತು ಸಸ್ಯಗಳು ಸಿಗುತ್ತವೆ. ಆದರೆ, ದೇಶದ ಜನರ ಸಂಖ್ಯೆಯ ಜೊತೆಗೆ ಲಭ್ಯವಿರುವ ಮರಗಳ ಸಂಖ್ಯೆಯನ್ನು ಹೋಲಿಸಿ ನೋಡಿದರೆ, ಇಳಿಮುಖವಾಗುತ್ತಿರುವ ಅಂಕಿಅಂಶಗಳು ವಿಷಾದವುಂಟು ಮಾಡುತ್ತವೆ. ಜಗತ್ತಿನಾದ್ಯಂತ ಒಬ್ಬ ವ್ಯಕ್ತಿಗೆ ಸರಾಸರಿ 422 ಮರಗಳಿದ್ದರೆ, ಭಾರತದಲ್ಲಿ ಈ ಪ್ರಮಾಣ ಕೇವಲ 28 ಮಾತ್ರ. ಎಲ್ಲಕ್ಕಿಂತ ಎದೆಗುಂದುವ ಸಂಗತಿ ಎಂದರೆ, ದೇಶದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬೈಲ್ಲಿ, ಒಬ್ಬ ವ್ಯಕ್ತಿಗೆ ಇರುವುದು ಕೇವಲ 4 ಮರಗಳು ಮಾತ್ರ.
ಸಂಪೂರ್ಣ ಹಸಿರು ಮತ್ತು ಸ್ವಚ್ಛ ನಗರಗಳ ಪೈಕಿ ಕೆನಡಾ ಅತ್ಯುಚ್ಚ ಸ್ಥಾನದಲ್ಲಿದ್ದು, ಒಬ್ಬ ವ್ಯಕ್ತಿಯ ತಲಾ ಮರಗಳ ಸಂಖ್ಯೆ 8,953. ರಷ್ಯ ನಂತರದ ಸ್ಥಾನದಲ್ಲಿದ್ದು, ಅಲ್ಲಿ ಒಬ್ಬ ವ್ಯಕ್ತಿಗೆ 4,461 ಹಾಗೂ ಆಸ್ಟ್ರೇಲಿಯಾದಲ್ಲಿ 3,266 ಇವೆ. ವ್ಯಕ್ತಿಯ ತಲಾ ಮರಗಳ ಸಂಖ್ಯೆ ಹೆಚ್ಚು ಕಡಿಮೆಯಾಗಲು ನಾನಾ ಕಾರಣಗಳಿರಬಹುದು. ಸರಕಾರದ ನೀತಿಗಳು, ಪುರಾತನ ಕಾಲದಿಂದ ಇರುವ ಹಸಿರು ಹೊದಿಕೆ, ಸಾರ್ವಜನಿಕ ಜಾಗೃತಿ ಮತ್ತು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಕಾರಣವಾಗಿರಬಹುದು. ಆದರೆ, ಇವೆಲ್ಲ ಅಥವಾ ಇವುಗಳ ಪೈಕಿ ಬಹುತೇಕ ಕಾರಣಗಳು ಭಾರತದಲ್ಲಿ ಕಾಣಸಿಗುವುದಿಲ್ಲ ಎಂಬುದೇ ಚಿಂತೆ ತರುವಂಥದು. ಏಕೆಂದರೆ, ಮರಗಳನ್ನು ಕಡಿಯುವುದು ಮತ್ತು ಮರಗಳನ್ನು ಬೆಳೆಸುವಲ್ಲಿ ನಿರ್ಲಕ್ಷ್ಯ ತೋರುವುದು ಇಲ್ಲಿ ನಿತ್ಯ ಕಳವಳ ಮೂಡಿಸುವಂತಹ ಸಂಗತಿ. ಈ ಕಾರಣಗಳಿಂದಾಗಿ, ನಮ್ಮ ದೇಶದಲ್ಲಿ ಅರಣ್ಯ ನಾಶ ಅತ್ಯಧಿಕ ಪ್ರಮಾಣದಲ್ಲಿ ನಡೆಯುತ್ತಿದೆ.
ಅರಣ್ಯನಾಶ ಮತ್ತು ಅರಣ್ಯ ನಶಿಸುವಿಕೆಗಳಷ್ಟೇ ದೇಶದ ಪ್ರಮುಖ ಸಮಸ್ಯೆಗಳಲ್ಲ. ಈ ಪ್ರಕ್ರಿಯೆ ಇಡೀ ಜಗತ್ತಿನಾದ್ಯಂತ, ಅಧಿಕ ಪ್ರಮಾಣದಲ್ಲಿ ನಡೆದಿದೆ ಎಂಬುದೇ ಕಳವಳಕಾರಿ.
ಅಮೆರಿಕದ ಸಂಶೋಧನಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಇಡೀ ಭೂಮಿ ಅತ್ಯಧಿಕ ಹಸಿರಿನಿಂದ ತುಂಬಿಕೊಂಡಿರಬೇಕಿತ್ತು. ಕನಿಷ್ಠ 1000 ಕೋಟಿ ಹೆಕ್ಟೇರ್ ಪ್ರಮಾಣದಲ್ಲಿ ಅರಣ್ಯ ಇರಬೇಕಿತ್ತು. ಅದಾಗ್ಯೂ, 1990 ರಿಂದ ಈಚೆಗೆ 12.90 ಕೋಟಿ ಹೆಕ್ಟೇರ್ ಹಸಿರು ಹೊದಿಕೆ ಭೂಮಂಡಲದ ಮೇಲ್ಮೈಯಿಂದಲೇ ನಶಿಸಿ ಹೋಗಿದ್ದು, ಈಗಲೂ ನಾಶದ ಬೆಳವಣಿಗೆ ಅಪಾಯಕಾರಿ ಪ್ರಮಾಣದಲ್ಲಿದೆ. ಇದಕ್ಕೆ ನಾನಾ ಕಾರಣಗಳಿವೆ. ಮರಮುಟ್ಟು ಕಳ್ಳಸಾಗಣೆ, ಅರಣ್ಯ ದೋಚುವಿಕೆ, ಕಾಡ್ಗಿಚ್ಚು, ಕೈಗಾರೀಕರಣ, ಕೃಷಿಗಾಗಿ ಅರಣ್ಯ ತೆರವುಗೊಳಿಸುವುದು, ಕೃಷಿ ಮತ್ತು ಇನ್ನೂ ಹಲವಾರು ಮಾನವ ನಿರ್ಮಿತ ತಪ್ಪುಗಳು ಇದರಲ್ಲಿ ಸೇರಿವೆ. ಅಂದಾಜು 90 ಕೋಟಿ ಜನರು ತಮ್ಮ ಜೀವನೋಪಾಯಕ್ಕಾಗಿ ಅರಣ್ಯಗಳನ್ನೇ ಅವಲಂಬಿಸಿದ್ದಾರೆ.
ವಿಶೇಷವಾಗಿ ಭಾರತದಲ್ಲಿ, ನಾವು ಅರಣ್ಯಗಳನ್ನು ಅತಿ ವೇಗವಾಗಿ ಕಳೆದುಕೊಳ್ಳುತ್ತಿದ್ದೇವೆ. 1998ರ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ, ಭಾರತದ ಭೂಭಾಗದ ಮೂರನೇ ಒಂದು ಭಾಗ ಅರಣ್ಯಗಳಿಂದ ತುಂಬಿರಬೇಕು. ಹೀಗಿದ್ದರೂ, ಸದ್ಯ ದೇಶದ ಕೇವಲ ಶೇಕಡಾ 24.39 ರಷ್ಟು ಭಾಗದಲ್ಲಿ ಮಾತ್ರ ಅರಣ್ಯವಿದೆ. ಭಾರತೀಯ ಅರಣ್ಯ ಸಮೀಕ್ಷೆ ಒಕ್ಕೂಟವು 2017ರಲ್ಲಿ ಸಲ್ಲಿಸಿದ ಸಮೀಕ್ಷಾ ವರದಿಯ ಪ್ರಕಾರ, ವರ್ಷದಿಂದ ವರ್ಷಕ್ಕೆ ಅರಣ್ಯನಾಶ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ. ನಮ್ಮ ಕಣ್ಣೆದುರೇ ಅರಣ್ಯಗಳು ಕಣ್ಮರೆಯಾಗುತ್ತ ಸಾಗಿವೆ. ಎರಡೂ ತೆಲುಗು ರಾಜ್ಯಗಳೂ ಇದಕ್ಕೆ ಹೊರತಾಗಿಲ್ಲ. ಹಾಗೆ ನೋಡಿದರೆ, ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಇಲ್ಲಿ ಅರಣ್ಯ ಪ್ರದೇಶದ ಇಳಿಕೆ ದೊಡ್ಡ ಪ್ರಮಾಣದಲ್ಲಿದೆ.
ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ ನಗರವು ತನ್ನ ಹಸಿರು ತೋಪುಗಳು, ಸರೋವರಗಳು ಹಾಗೂ ಇತರ ಜಲಮೂಲಗಳಿಂದಾಗಿ ವೈವಿಧ್ಯಮಯ ಜೈವಿಕ ವ್ಯವಸ್ಥೆಗೆ ಹೆಸರಾಗಿದೆ. ದುರದೃಷ್ಟವಶಾತ್, ಈ ನಗರ ಕೂಡಾ, ವಿಸ್ತರಿಸುತ್ತಿರುವ ತನ್ನ ಜನಸಂಖ್ಯೆಗೆ ವಸತಿ ಕಲ್ಪಿಸಲಿಕ್ಕಾಗಿ, ಅರಣ್ಯನಾಶದ ಹಿಡಿತಕ್ಕೆ ಸಿಲುಕಿದ್ದು, ಪ್ರಸ್ತುತ ತನ್ನ ಶೇಕಡಾ 60 ರಷ್ಟು ಹಸಿರು ಹೊದಿಕೆಯನ್ನು ಕಳೆದುಕೊಂಡಿದೆ. ಇದೇ ಪರಿಸ್ಥಿತಿ ಇನ್ನೊಂದು ತೆಲುಗು ರಾಜ್ಯದಲ್ಲಿಯೂ ಇದ್ದು, ಅಲ್ಲಿಯೂ ಹಸಿರು ಹೊದಿಕೆ ಪ್ರಮಾಣ ಇಳಿಮುಖವಾಗಿ ಸಾಗಿದೆ.
ಅರಣ್ಯ ನಾಶ ಕೇವಲ ಆಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳನ್ನಷ್ಟೇ ತರುವುದಿಲ್ಲ. ಅದು ಮುಂಗಾರು ಮಾರುತಗಳ ಚಲನೆಯ ದಿಕ್ಕನ್ನೇ ಬದಲಾಯಿಸುವಷ್ಟು ಪ್ರಮುಖ ಅಂಶವಾಗಿ ಬೆಳೆಯುತ್ತಿದ್ದು, ಸಾಗುವಳಿ ಮತ್ತು ಕೃಷಿಯ ಜೊತೆಗೆ ಪ್ರಾಣಿ ಮತ್ತು ಸಸ್ಯ ಜಗತ್ತುಗಳ ವಂಶಾಭಿವೃದ್ಧಿ ಋತುಚಕ್ರದ ಮೇಲೂ ಪರಿಣಾಮ ಉಂಟು ಮಾಡುತ್ತಿದೆ. ಅರಣ್ಯ ನಾಶ ಮತ್ತು ಕರಗುತ್ತಿರುವ ಹಸಿರು ಹೊದಿಕೆಯಿಂದಾಗಿ ಜೀವ ವೈವಿಧ್ಯ ವ್ಯವಸ್ಥೆ ಹೆಚ್ಚು ಕ್ಷೋಭೆಗೆ ಒಳಗಾಗಿದ್ದು, ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡುಪ್ರಾಣಿಗಳು ತಮ್ಮ ನೈಸರ್ಗಿಕ ತಾಣಗಳಿಂದ ಹೊರಬರುವಂತಾಗಿದೆ. ಇಂತಹ ಅರಣ್ಯ ನಾಶದಿಂದಾಗಿ ಕೃಷಿಗೆ ಬೇಕಾಗುವ ಮಳೆನೀರಿನ ಲಭ್ಯತೆಯನ್ನು ಮನುಕುಲ ಕಳೆದುಕೊಳ್ಳುತ್ತಿದ್ದು, ಜೀವದಾಯಕ ಆಮ್ಲಜನಕ ಕಡಿಮೆಯಾಗುತ್ತಿರುವ ಜೊತೆಗೆ ಬರಪೀಡಿತ ಸಮಾಜ ನಿರ್ಮಾಣವಾಗುವ ಭೀತಿ ತಲೆದೋರಿದೆ!!
ಪೂರ್ಣವಾಗಿ ಬೆಳೆದಿರುವ ಒಂದು ಮರ ವರ್ಷಕ್ಕೆ ಅಂದಾಜು 0.53 ಟನ್ ಇಂಗಾಲದ ಡೈ ಆಕ್ಸೈಡ್ ಹಾಗೂ 1.95 ಕೆಜಿ ಇತರ ಮಾಲಿನ್ಯಗಳನ್ನು ಹೀರಿಕೊಂಡು ಅಂದಾಜು ರೂ. 24 ಲಕ್ಷ ಮೌಲ್ಯದ ಆಮ್ಲಜನಕ ಉತ್ಪಾದನೆ ಮಾಡುತ್ತದೆ ಎನ್ನಲಾಗಿದೆ. ಅಲ್ಲದೇ, ಅಂದಾಜು 1,400 ಗ್ಯಾಲನ್ ಮಳೆ ನೀರು ಭೂಮಿಯ ಆಳದ ಪದರುಗಳಲ್ಲಿ ಸಂಗ್ರಹವಾಗಲು ನೆರವಾಗುತ್ತದೆ. ಒಬ್ಬ ಆರೋಗ್ಯವಂತ ಮನುಷ್ಯನ ದಿನದ ಆಮ್ಲಜನಕ ಬಳಕೆ ಪ್ರಮಾಣ ಅಂದಾಜು 3 ಸಿಲಿಂಡರ್‌ಗಳಷ್ಟು. ಇದೇ ಪ್ರಮಾಣದಲ್ಲಿ, ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಆಮ್ಲಜನಕ ಉಸಿರಾಡಬೇಕೆಂದರೆ, ಆತ ತನ್ನ ಜೀವಿತಾವಧಿಯಲ್ಲಿ ಕನಿಷ್ಟ 3 ಮರಗಳನ್ನಾದರೂ ಬೆಳೆಸಬೇಕು. ಮನುಷ್ಯರು ಸ್ನೇಹಮಯಿ ಹಾಗೂ ಸಾಮಾಜಿಕ ಜೀವಿಗಳು ಎಂದು ಹೆಸರಾಗಿದ್ದಾರೆ. ಅದಾಗ್ಯೂ, ನಮ್ಮ ಅಸ್ತಿತ್ವದ ಮೂಲವೇ ಆಗಿರುವ ಮರಗಳ ಕುರಿತಂತೆ ನಾವು ಎಷ್ಟು ಸ್ನೇಹಮಯಿ ಹಾಗೂ ಕಾಳಜಿಯುಳ್ಳವರಾಗಿದ್ದೇವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಇದೊಂದು ಸಂಘಟಿತ ಜವಾಬ್ದಾರಿ
ಮನುಷ್ಯನ ಅಸ್ತಿತ್ವ ಕಾಪಾಡಲು ತೋಪುಗಳು ಮತ್ತು ಮರಗಳ ಅವಶ್ಯಕ ಎಂಬುದರ ಕುರಿತು ಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ “ಗ್ರೀನ್ ಇಂಡಿಯಾ ಚಾಲೆಂಜ್”ನಂತಹ (ಹಸಿರು ಭಾರತ ಸವಾಲು) ಸಂಘಟನೆಗಳು ಮುಂದೆ ಬಂದಿವೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತ ಕಾಲದಲ್ಲಿ ಕನಿಷ್ಠ 3 ಮರಗಳ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಆ ಮೂಲಕ ತಾನು ತನ್ನ ಜೀವಿತಾವಧಿಯಲ್ಲಿ ಅವುಗಳಿಂದ ಪಡೆದುಕೊಳ್ಳುವ ಆಮ್ಲಜನಕವನ್ನು ಪ್ರಕೃತಿಗೆ ವಾಪಾಸ್ ನೀಡಬೇಕು ಎಂಬ ಗುರಿಯನ್ನು ಸಾಧಿಸಲು ಅವರನ್ನು ಪ್ರೇರೇಪಿಸುವ ಕೆಲಸವನ್ನು ಈ ಸಂಘಟನೆಗಳು ಮಾಡುತ್ತಿವೆ. ಇಂತಹ ಸಂಘಟನೆಗಳ ಹಲವಾರು ಕಾರ್ಯತತ್ಪರತೆ ಕೆಲಸಗಳಿಂದಾಗಿ, ಪರಿಸರ ಹಾಗೂ ಅರಣ್ಯೀಕರಣ ವಿಷಯಗಳು ಈಗ ಸಾಮಾಜಿಕ ಜವಾಬ್ದಾರಿ ಎಂದು ಗುರುತಿಸಲ್ಪಡುವಂತಾಗಿದೆ.