ನವದೆಹಲಿ:ಕೇಂದ್ರ ಸರ್ಕಾರ ಲಾಕ್‌ಡೌನ್ ಅನ್ನು ಮೇ 31 ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್ ಕ್ರಮಗಳನ್ನು 2020 ಮೇ 31 ರವರೆಗೆ ಮುಂದುವರಿಸಲು ಕೆಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಪ್ರಾಧಿಕಾರಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶ ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳಲ್ಲಿ ಮಾರ್ಪಾಡುಗಳನ್ನು ನೀಡುವಂತೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ದೇಶಿಸಿದೆ. ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ದೇಶದಲ್ಲಿ ಇನ್ನೂ 14 ದಿನಗಳವರೆಗೆ ಲಾಕ್‌ಡೌನ್ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಮೇ 31 ರವರೆಗೆ ಲಾಕ್‌ಡೌನ್ ಮುಂದುವರೆಯಲಿದೆ ಎಂದು ಆದೇಶಿಸಿರುವ ಕೇಂದ್ರ ಗೃಹ ಇಲಾಖೆ ಆಯಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಅಧಿಕಾರಿಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಗಳನ್ವಯ ವಾಣಿಜ್ಯ ಚಟುವಟಿಕೆಗಳಿಗೆ ಕೆಲವು ಸಡಿಲಿಕೆ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ನಮೂದಿಸಿದೆ.
ಏನಿರಲ್ಲ:
- ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇರುವುದಿಲ್ಲ
- ಎಲ್ಲಾ ಮೆಟ್ರೋ ಸೇವೆ ಬಂದ್
- ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ
- ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಜಿಮ್, ಚಿತ್ರಮಂದಿರಗಳಿಗೆ ನಿರ್ಬಂಧ
- ಅಂತಾರಾಜ್ಯ ಬಸ್ ಸಂಚಾರದ ಕುರಿತು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸಲಿ
- ಸಭೆ, ಸಮಾರಂಭ, ಸಾಂಸ್ಕೃತಿಕ, ಮನರಂಜನೆ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ
- ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ
ಏನಿರುತ್ತೆ?
- ಅಡುಗೆ ಮನೆಗಳನ್ನು ನಿರ್ವಹಿಸಲು ರೆಸ್ಟೋರೆಂಟ್‌ಗಳಿಗೆ ಅನುಮತಿ, ಪಾರ್ಸೆಲ್ ಸೌಲಭ್ಯ ಮಾತ್ರ
- ಪರಸ್ಪರ ಒಪ್ಪಿಗೆಯಿಂದ ಅಂತಾರಾಜ್ಯ ಪ್ರಯಾಣಿಕರ ವಾಹನಗಳು ಮತ್ತು ಬಸ್ಸುಗಳನ್ನು ಆರಂಭಿಸಬಹುದು
- ರಾಜ್ಯದೊಳಗಿನ ಸಾರಿಗೆ ಸೇವೆ ಆರಂಭಿಸುವ ನಿರ್ಧಾರ ಆಯಾ ರಾಜ್ಯಗಳಿಗೆ ಬಿಟ್ಟಿದ್ದು
- ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳ ರಾಜ್ಯ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ
- ಸರಕು ಸಾಗಣೆ ವಾಹನಗಳ ಅಂತರರಾಜ್ಯ ಸಂಚಾರಕ್ಕೆ ಅನುಮತಿ
- ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಂ ತೆರೆಯಲು ಅನುಮತಿ ನೀಡಿದ್ದು, ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಸಚಿವಾಲಯದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳನ್ನು ವರ್ಗೀಕರಿಸಬೇಕು ಎಂದು ತಿಳಿಸಿದೆ. ರಾತ್ರಿ ಕರ್ಫ್ಯೂ ಮುಂದುವರಿಯಲಿದ್ದು, ಎಲ್ಲಾ ಅನಿವಾರ್ಯವಲ್ಲದ ಚಟುವಟಿಕೆಗಳಿಗೆ ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ ನಿರ್ಬಂಧ ಇರಲಿದೆ.
ಕಂಟೇನ್ಮೆಂಟ್ ಝೋನ್ಗಳಲ್ಲಿ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಇದಲ್ಲದೆ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ವಿವಿಧ ವಲಯಗಳಲ್ಲಿ ಇತರ ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ಅಗತ್ಯವೆಂದು ಪರಿಗಣಿಸುವಂತಹ ನಿರ್ಬಂಧಗಳನ್ನು ವಿಧಿಸಬಹುದು ಎಂದಿದೆ.