ಏಪ್ರಿಲ್ನಿಂದ ಜೂನ್ ತಿಂಗಳ ನಡುವೆ ಭಾರತದ ಜಿಡಿಪಿ ಭಾರೀ ಕಡಿಮೆ ಅಂದರೆ ಶೇ. 5ಕ್ಕೆ ಇಳಿದಿತ್ತು. ಹೆಚ್ಚುತ್ತಿರುವ ಆಹಾರ ಬೆಲೆಗಳಿಂದಾಗಿ ಚಿಲ್ಲರೆ ಹಣದುಬ್ಬರ ಕೂಡಾ ಆಗಸ್ಟ್‌ನಲ್ಲಿ 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತ್ತು. ಅಲ್ಲದೆ ಮೇ 2019ರಲ್ಲಿ ದೇಶದಲ್ಲಿನ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲಿಯೇ ಗರಿಷ್ಠ ಅಂದರೆ ಶೇ. 6.1ರಷ್ಟು ಹೆಚ್ಚಿತ್ತು.
ಭಾರತದ ಇತರ ಭಾಗಗಳಂತೆ ಕೃಷಿ ವಲಯದಲ್ಲಿನ ಬಿಕ್ಕಟ್ಟು, ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಮತ್ತು ನಿರುದ್ಯೋಗ ಪ್ರಮಾಣದ ಹೆಚ್ಚಳ ಮಹಾರಾಷ್ಟ್ರ ಮತ್ತು ಹರಿಯಾಣದ ಜನರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಾಗಿವೆ. ಇದರ ಪರಿಣಾಮವಾಗಿ, ಅಧಿಕಾರದಲ್ಲಿರುವ ಸರ್ಕಾರದ ಬಗ್ಗೆ ಜನರಲ್ಲಿ ಬೇಸರ ಮೂಡಿದ್ದು ಸಹಜ. ಇದು ಜನರಲ್ಲಿ ಸರ್ಕಾರದ ವಿರುದ್ಧವಾದ ಮನೋಭಾವ ಮೂಡುವಂತೆ ಮಾಡಿತು.
ನೈಜ ವಿಷಯಗಳ ಬಗ್ಗೆ ಮತದಾರರು ಹೊಂದಿದ್ದ ಕೋಪ ಮತ್ತು ಅಸಮಾಧಾನವನ್ನ ಕಡಿಮೆ ಮಾಡಲು ಆಡಳಿತಾರೂಢ BJP ಮಹಾರಾಷ್ಟ್ರದ ಪ್ರತಿಪಕ್ಷಗಳದ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳಿಂದ ಪಕ್ಷಾಂತರಗೊಂಡವರ ಮೇಲೆ ಹಣ ಹೂಡಿತು. ಅಲ್ಲದೆ 370ನೇ ವಿಧಿ ರದ್ಧತಿ, ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರವನ್ನ ಬಿಜೆಪಿ ಪ್ರಚಾರದಲ್ಲಿ ಬಳಸಿಕೊಂಡಿತು. ಚುನಾವಣೆಗೆ ಒಂದು ದಿನ ಮುಂಚಿತವಾಗಿ ಗಡಿಯಲ್ಲಿ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ, ಉಗ್ರರ 3 ಅಡಗುದಾಣಗಳನ್ನ ಧ್ವಂಸಗೊಳಿಸಿತು. ಈ ಮೂಲಕ ಮತದಾರರಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿತು.
ಆದ್ರೆ ಈ ಎಲ್ಲಾ ವಿಚಾರಗಳು ಸಂಪೂರ್ಣವಾಗಿ ಬಿಜೆಪಿ ಪರ ಕೆಲಸ ಮಾಡಲಿಲ್ಲ ಎನ್ನಬಹುದು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ 161 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 2014ರಲ್ಲಿ ಬಿಜೆಪಿ 122 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಆದ್ರೆ 2019ರಲ್ಲಿ ಆ ಸಂಖ್ಯೆ 105ಕ್ಕೆ ಇಳಿದಿದೆ. ಅತ್ತ ಹರಿಯಾಣದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ರೆ 2014ರಲ್ಲಿ 47 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಕಮಲ ಪಕ್ಷ 2019ರಲ್ಲಿ 40ಕ್ಕೆ ಕುಸಿದಿದೆ.
ಈ ಎಲ್ಲಾ ಅಂಶಗಳನ್ನ ಗಮನಿಸೋದಾದ್ರೆ ಮುಂದೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಸಮುದಾಯಗಳ ಧ್ರುವೀಕರಣ ವಿಷಯಗಳನ್ನ ಬಿಜೆಪಿ ತುಂಬಾ ಎಚ್ಚರಿಕೆಯಿಂದ ಬಳಸಿಕೊಳ್ಳಲಿದೆ. ಇನ್ನು ಪಕ್ಷಾಂತರ ಮಾಡಿದವರೇ ಹೆಚ್ಚು ಸೋತಿದ್ದಾರೆ. ಹೀಗಾಗಿ ಮುಂಬರುವ ಜಾರ್ಖಂಡ್ ಮತ್ತು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಾಂತರಿಗಳಿಗೆ ಮಣೆ ಹಾಕುವ ಬಗ್ಗೆ ಹೆಚ್ಚು ಜಾಗರೂಕತೆ ವಸಿಸಬಹುದು.
ಹರಿಯಾಣದಲ್ಲಿ ಕಾಂಗ್ರೆಸ್ ಕಮಾಲ್:
ಹರಿಯಾಣದಲ್ಲಿ ಜಾಟ್ ಸಮುದಾಯದ ಜನರೇ ಹೆಚ್ಚಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷ ಬೇರೆ ಸಮುದಾಯದ ನಾಯಕ ಭೂಪಿಂದರ್ ಸಿಂಗ್ ಹೂಡ ಅವರನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಇದನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿತು. ಆದರೂ ಕಾಂಗ್ರೆಸ್ ಪಕ್ಷ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜಾಟ್ ಸಮುದಾಯಕ್ಕೆ ಸೇರಿದ ಹಲವು ಬಿಜೆಪಿ ಅಭ್ಯರ್ಥಿಗಳು ಸೋತರು. ಜಾಟ್ ಸಮುದಾಯವಲ್ಲದ ಅನೇಕ ಕೈ ಅಭ್ಯರ್ಥಿಗಳು ಗೆಲುವು ಕಂಡಿರೋದು ವಿಶೇಷ.
ಪ್ರಚಾರ ಮಾಡದ ಸೋನಿಯಾ, ರಾಗಾ ಬಂದಿದ್ದೇ ಕಡಿಮೆ:
ಹರಿಯಾಣದಲ್ಲಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಕಡೇ ಕ್ಷಣದಲ್ಲಿ ಸೋನಿಯಾ ಗಾಂಧಿ ಪ್ರಚಾರದಿಂದ ದೂರ ಉಳಿದರು. ಇನ್ನು ರಾಹುಲ್ ಗಾಂಧಿ ಹರಿಯಾಣದಲ್ಲಿ 2 ಕಡೆ ಮತ್ತು ಮಹಾರಾಷ್ಟ್ರದಲ್ಲಿ 5 ಕಡೆ ಚುನಾವಣಾ ಪ್ರಚಾರ ನಡೆಸಿದ್ರು. ಅತ್ತ ಪ್ರಿಯಾಂಕಾ ಗಾಂಧಿ ಕೂಡ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು.
ಗಾಂಧಿ ಕುಟುಂಬಸ್ಥರ ಅನುಪಸ್ಥಿತಿಯ ನಡುವೆಯೂ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶ ದೊರಕಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡರೆ, ಹರಿಯಾಣದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಇತ್ತ ಬಿಜೆಪಿ ಪಾಳಯದಲ್ಲಿ ಪ್ರಧಾನಿ ಮೋದಿ ಮಹಾರಾಷ್ಟ್ರಲ್ಲಿ 9 ಕಡೆ ಪ್ರಚಾರ ನಡೆಸಿದ್ರೆ, ಹರಿಯಾಣದಲ್ಲಿ 7 ಕಡೆ ಪ್ರಚಾರ ನಡೆಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರಲ್ಲಿ 16 ಕಡೆ ಪ್ರಚಾರ ನಡೆಸಿದ್ರೆ, ಹರಿಯಾಣದಲ್ಲಿ 12 ಕಡೆ ಪ್ರಚಾರ ನಡೆಸಿದ್ದರು.
ಪ್ರಬಲ ಸಮುದಾಯದ ಎದುರು ಬೇರೆ ಸಮುದಾಯದ ನಾಯಕರನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಂಪ್ರದಾಯಿಕ ವಿಧಾನವನ್ನ ಬಿಜೆಪಿ ಪರಿಶೀಲಿಸುವ ಕಾಲ ಬಂದಿದೆ ಎನ್ನಬಹುದು. ಏಕೆಂದರೆ ಹರಿಯಾಣದಲ್ಲಿ ಜಾಟ್ ಸಮುದಾಯ ಪ್ರಾಬಲ್ಯ ಹೊಂದಿದೆ. ಆದರೂ ಬಿಜೆಪಿ ಪಂಜಾಬ್ ಸಮುದಾಯಕ್ಕೆ ಸೇರಿದ ಮನೋಹರ್ ಲಾಲ್ ಖಟ್ಟರ್ ಅವರನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿತು. ಇದು ಜಾಟ್ ಸಮುದಾಯದ ಆಕ್ರೋಶಕ್ಕೆ ಕಾರಣವಾಯಿತು. ಇತ್ತ ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯವೇ ಪ್ರಾಬಲ್ಯ ಹೊಂದಿದೆ. ಆದರೂ ಬೇರೆ ಸಮುದಾಯದ ದೇವೇಂದ್ರ ಫಡ್ನವಿಸ್ ಅವರನ್ನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿತು.