ಪ್ರಪಂಚದ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಧ್ವಜವಿದೆ. ಇದು ಮುಕ್ತ ದೇಶದ ಸಂಕೇತವಾಗಿದೆ. ಭಾರತದ ರಾಷ್ಟ್ರೀಯ ಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಕಡು ಹಸಿರು ಬಣ್ಣ ಹೊಂದಿದ್ದು, ತ್ರಿವರ್ಣ ಧ್ವಜವಾಗಿದೆ. ಬಿಳಿಭಾಗದ ಮಧ್ಯದಲ್ಲಿ ಅಶೋಕ ಚಕ್ರವಿದೆ.
ಭಾರತದ ಮೊದಲ ಧ್ವಜ 1906 ರಲ್ಲಿ ರಚನೆಯಾಯಿತು. ಕೋಲ್ಕತ್ತಾದ ಬಗಾನ್ ಚೌಕ್ನಲ್ಲಿ ಹಾರಿಸಲಾಯಿತು. ಬಳಿಕ ಕೆಲವು ಮಾರ್ಪಾಡುಗಳೊಂದಿಗೆ ಸ್ವಾತಂತ್ರ್ಯದ ವೇಳೆಗೆ ಪೂರ್ಣಕ್ಕೆ ಬಂದಿತ್ತು. ಇಂದು ನಾವು ಹಾರಿಸುವ ತ್ರಿವರ್ಣ ಧ್ವಜಕ್ಕಿಂತ ಮುಂಚೆ ಭಾರತದಲ್ಲಿ ದೇಶ ಪ್ರೇಮದ ಪ್ರತೀಕವಾಗಿ ಐದು ಬಾವುಟಗಳನ್ನು ಹಾರಿಸಲಾಗಿತ್ತು. 1931ರಲ್ಲಿ ಈಗಿನ ರಾಷ್ಟ್ರಧ್ವಜ ರಚನೆ ಆಯಿತು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸೂಚನೆ ಮೇರೆಗೆ ಬಾವುಟದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಕ್ಕೆ ಮಹತ್ವ ನೀಡಲಾಯಿತು. ಮಧ್ಯೆ ಅಶೋಕ ಚಕ್ರ ಇರಿಸಲಾಯಿತು. ಹೀಗೆ ತಯಾರಾದ ಬಾವುಟವನ್ನು ರಾಷ್ಟ್ರೀಯ ಧ್ವಜವಾಗಿ ಅಳವಡಿಸಿಕೊಳ್ಳಲು ಡಾ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಜುಲೈ 22, 1947 ರಂದು ರಾಷ್ಟ್ರೀಯ ಧ್ವಜಕ್ಕೆ ಅಂಗೀಕಾರ ದೊರೆಯಿತು.