ಕರ್ನಾಟಕ

karnataka

ETV Bharat / bharat

ಇಂದು ರಾಷ್ಟ್ರೀಯ ವೈದ್ಯರ ದಿನ : ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಸಮರಕ್ಕಿಳಿದ ವೈದ್ಯರಿಗೆ ಅರ್ಪಣೆ

ಭಾರತವು ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿ.ಸಿ.ರಾಯ್ ಅವರ ಕೆಲಸ ಹೊಸ ಮತ್ತು ನವೀನ ತಂತ್ರಗಳಿಗೆ ಬುನಾದಿ ಹಾಕಿತು. ತಮ್ಮ ರೋಗಿಗಳ ಆರೋಗ್ಯಕ್ಕಾಗಿ ದಣಿವರಿವಿಲ್ಲದೆ ಕೆಲಸ ಮಾಡಿದ ಎಲ್ಲ ವೈದ್ಯರಿಗೂ ಧನ್ಯವಾದ ಅರ್ಪಿಸುವುದೇ ವೈದ್ಯ ದಿನಾಚರಣೆಯ ವಿಶಿಷ್ಟತೆ ಆಗಿದೆ.

By

Published : Jul 1, 2020, 7:02 AM IST

Updated : Jul 1, 2020, 9:00 AM IST

ಇಂದು ರಾಷ್ಟ್ರೀಯ ವೈದ್ಯರ ದಿನ
ಇಂದು ರಾಷ್ಟ್ರೀಯ ವೈದ್ಯರ ದಿನ

ವೈದ್ಯೋ ನಾರಾಯಣೋ ಹರಿ ಎಂಬ ನಾಣ್ಣುಡಿಯಂತೆ ಇಂದಿನ ಕೊರೊನಾ ಭೀತಿಯ ನಡುವೆ ಆರೋಗ್ಯ ಸಿಬ್ಬಂದಿ ಮಾನವನ ಪಾಲಿನ ದೇವರಂತಾಗಿದ್ದಾರೆ. ಜೀವ ನೀಡುವುದರಿಂದ ಹಿಡಿದು ಜೀವ ಉಳಿಸುವ ವರೆಗೂ ವೈದ್ಯರ ಪಾತ್ರ ಅತಿ ಮುಖ್ಯ. ಇಂತಹ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಜುಲೈ 1, ರಾಷ್ಟ್ರೀಯ ವೈದ್ಯರ ದಿನ.

ವೈದ್ಯರು ಮತ್ತು ವೈದ್ಯರ ನಿಸ್ವಾರ್ಥ ಸೇವೆ ಗುರುತಿಸಲು ಮತ್ತು ಗೌರವಿಸಲು ಪ್ರತಿವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಜನರಿಗೆ ಸೇವೆ ಸಲ್ಲಿಸುವ ವೈದ್ಯಕೀಯ ವೃತ್ತಿಪರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಇಂದಿನ ದಿನದ ಉದ್ದೇಶ. ಪಶ್ಚಿಮ ಬಂಗಾಳದ ವೈದ್ಯ ಮತ್ತು ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿಧಾನ್ ಚಂದ್ರ ರಾಯ್ ಅವರ ಜನನ ಮತ್ತು ಮರಣ ವಾರ್ಷಿಕೋತ್ಸವಗಳ ಗೌರವಾರ್ಥ ಇದನ್ನು ಆಚರಿಸಲಾಗುತ್ತದೆ.

ಭಾರತವು ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿ.ಸಿ.ರಾಯ್ ಅವರ ಕೆಲಸ ಹೊಸ ಮತ್ತು ನವೀನ ತಂತ್ರಗಳಿಗೆ ಬುನಾದಿ ಹಾಕಿತು. ತಮ್ಮ ರೋಗಿಗಳ ಆರೋಗ್ಯಕ್ಕಾಗಿ ದಣಿವರಿವಿಲ್ಲದೇ ಕೆಲಸ ಮಾಡಿದ ಎಲ್ಲ ವೈದ್ಯರಿಗೂ ಧನ್ಯವಾದ ಅರ್ಪಿಸುವುದೇ ವೈದ್ಯ ದಿನಾಚರಣೆಯ ಮಹದುದ್ದೇಶ

ವೈದ್ಯರ ದಿನವನ್ನು 1991 ರಲ್ಲಿ ಭಾರತ ಸರ್ಕಾರವು ಪ್ರತಿ ವರ್ಷ ಜುಲೈ 1 ರಂದು ಭಾರತದಾದ್ಯಂತ ಆಚರಿಸಲು ಆರಂಭಿಸಿತು. ವೈದ್ಯರ ದಿನವನ್ನು ಪ್ರಪಂಚದಾದ್ಯಂತ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಯುಎಸ್​ನಲ್ಲಿ ಮಾರ್ಚ್ 30 ರಂದು, ಕ್ಯೂಬಾದಲ್ಲಿ ಡಿಸೆಂಬರ್ 3 ರಂದು ಮತ್ತು ಇರಾನ್​ನಲ್ಲಿ ಆಗಸ್ಟ್ 23 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಡಾ.ರಾಯ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರಾಗಿದ್ದರು. ಲಂಡನ್​ನಿಂದ ಎಫ್​ಆರ್​ಸಿಎಸ್​ ಮತ್ತು ಎಂಆರ್​ಸಿಪಿ ಪದವಿ ಪಡೆದಿದ್ದರು. ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದ ಡಾ.ಬಿ.ಸಿ.ರಾಯ್, ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆ ಮಾಡಿದರು. ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದವರು. ಇವರು ಜುಲೈ 1, 1882ರಲ್ಲಿ ಜನಿಸಿ, ಜುಲೈ 1, 1962ರಂದು ನಿಧನರಾದರು.

ಅತಿವೇಗವಾಗಿ ಬೆಳೆದ ಜಗತ್ತಿನೊಂದಿಗೆ, ರೋಗಗಳು ಅಷ್ಟೇ ರಭಸವಾಗಿ ಹರಡಿದವು. ದಿನಕ್ಕೊಂದು ಹೊಸ ರೋಗ ಹುಟ್ಟುತ್ತಿರುವ ಈ ಕಲಿಕಾಲದಲ್ಲಿ ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಕೋವಿಡ್​ ಸಾಂಕ್ರಾಮಿಕದ ಈ ಸಮಯದಲ್ಲಿ ವೈದ್ಯಲೋಕದ ಕೊಡುಗೆ, ತ್ಯಾಗ ಗಣನೀಯವಾಗಿದೆ. ಮಾರಣಾಂತಿಕ ವೈರಸ್ ಸೋಂಕಿಗೆ ಒಳಗಾದ ಜನರ ಪ್ರಾಣಕ್ಕಾಗಿ ನಿರಂತರವಾಗಿ ಹೋರಾಡುವುದು ವೈದ್ಯರು, ಆರೋಗ್ಯ ಸಿಬ್ಬಂದಿ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜೀವ ಉಳಿಸಲು ವೈದ್ಯರು ಮಾಡುವ ಪ್ರಯತ್ನಗಳು ಎಲ್ಲಕ್ಕೂ ಮಿಗಿಲಾಗಿವೆ. ಕೊರೊನಾ ಸಾಂಕ್ರಾಮಿಕ ಹರಡಿದಾಗಿನಿಂದ ವಿಶ್ವದಾದ್ಯಂತ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ತಜ್ಞರು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ವೈರಸ್ ಸೋಂಕಿತ ರೋಗಿಗಳ ಆರೈಕೆಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಈ ನಡುವೆ ಅನೇಕ ವೈದ್ಯರು ಕೊರೊನಾ ಮಹಾಮಾರಿಗೆ ತುತ್ತಾಗಿದ್ದಾರೆ. ಹಲವರು ಗುಣಮುಖರಾಗಿದ್ದು, ಇನ್ನೂ ಕೆಲವರು ಸಾವನ್ನಪ್ಪಿದ್ದಾರೆ.

ಹೀಗೆ ರೋಗಿಗಳ ಜೀವ ಉಳಿಸಲು ಹಗಲು - ರಾತ್ರಿ ದುಡಿಯುತ್ತಿರುವ ವೈದ್ಯರಿಗೆ ಹೃತ್ಪೂರ್ವಕ ಕೃತ್ಞಜತೆ ಸಲ್ಲಿಸುವ ದಿನವೇ ಈ ರಾಷ್ಟ್ರೀಯ ವೈದ್ಯರ ದಿನ. ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಸಮರಕ್ಕಿಳಿದ ಎಲ್ಲ ವೈದ್ಯರು, ಆರೋಗ್ಯ ಸಿಬ್ಬಂದಿಗೆ ನಮ್ಮದೊಂದು ಸಲಾಂ

Last Updated : Jul 1, 2020, 9:00 AM IST

ABOUT THE AUTHOR

...view details