ನಾಸಿಕ್ (ಮಹಾರಾಷ್ಟ್ರ):ಬೆಳೆ ಹಾನಿ, ಬೆಳೆ ಇಳಿಕೆ ಮುಂತಾದ ಸಮಸ್ಯೆಗಳ ನಡುವೆಕೇವಲ ನಾಲ್ಕು ಎಕರೆ ಪ್ರದೇಶದಲ್ಲಿಕೊತ್ತಂಬರಿ ಬೆಳೆದು ರೈತನೊಬ್ಬ 12,51,000 ರೂಪಾಯಿ ಗಳಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ನಂದೂರ್ ಶಿಂಗೋಟೆ ಮೂಲದವರಾದ ರೈತ ವಿನಾಯಕ್ ಹೆಮಡೆ ಅಪರೂಪದ ಸಾಧನೆ ಮಾಡಿರುವ ರೈತ. ಕೊತ್ತಂಬರಿ ಬೆಳೆದು ಯಾರೂ ಊಹಿಸಿರದ ರೀತಿಯಲ್ಲಿ 12 ಲಕ್ಷ ರೂಪಾಯಿ ಹಣ ಗಳಿಸಿದ್ದಾನೆ ಈ ಪ್ರಗತಿಪರ ರೈತ.
ಈತ 45 ಕೆಜಿ ಕೊತ್ತಂಬರಿ ಬೀಜಗಳನ್ನು ನಾಲ್ಕು ಎಕರೆಯಲ್ಲಿ ಬಿತ್ತನೆ ಮಾಡಿದ್ದ, ಯಾವುದೇ ರಾಸಾಯನಿಕಗಳನ್ನು ಬಳಸದೇ ಕೇವಲ ಸಾವಯವ ಗೊಬ್ಬರವನ್ನು ಬಳಸಲಾಗಿದೆ ಎಂದು ರೈತ ವಿನಾಯಕ್ ಹೆಮಡೆ ಹೇಳಿದ್ದಾರೆ.
ವಿನಾಯಕ್ ಹೆಮಡೆ ಬಳಿ 13 ಹಸುಗಳಿದ್ದು, ದಿನಕ್ಕೆ ನೂರು ಲೀಟರ್ ಹಾಲು ಕೊಡುತ್ತವೆ. ಕೊತ್ತಂಬರಿ ಬೆಳೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ''ಕೊತ್ತಂಬರಿ ಬೆಳೆದ ಮೇಲೆ ನನ್ನ ಅದೃಷ್ಟ ಬದಲಾಗಿದೆ. ಬೆಳೆದ ಕೊತ್ತಂಬರಿ ಸೊಪ್ಪನ್ನು ನನ್ನ ಸ್ನೇಹಿತನಿಗೇ ಮಾರಿದ್ದೇನೆ. ಹಸುಗಳಿದ್ದ ಕಾರಣ ರಾಸಾಯನಿಕ ಗೊಬ್ಬರ ಬಳಸದೇ ಸಾವಯವ ಗೊಬ್ಬರ ಬಳಸಿದ್ದೇನೆ' ಎಂದಿದ್ದಾರೆ.
ಲಾಕ್ಡೌನ್ ಆರಂಭವಾದಾಗಿನಿಂದ ಕೊತ್ತಂಬರಿ ಸೊಪ್ಪಿನ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಕೆ ಕಂಡಿತ್ತು. ಇದರಿಂದಾಗಿ ಅತಿ ಹೆಚ್ಚು ಬೆಲೆ ಕೊತ್ತಂಬರಿ ಸೊಪ್ಪು ಮಾರಾಟವಾಗಿದೆ.
ಸುದ್ದಿ ಹರಡುತ್ತಿದ್ದಂತೆ ವಿನಾಯಕ್ ಹೆಮಡೆ ನಗದು ಹಣವನ್ನು ತಮ್ಮ ತಲೆಯ ಮೇಲೆ ಹೊತ್ತು ತಿರುಗುತ್ತಿರುವ ನಕಲಿ ಚಿತ್ರ ಹರಿದಾಡತೊಡಗಿತ್ತು. ಈ ರೀತಿ ನಾನು ನಡೆದುಕೊಂಡಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಮಹಾರಾಷ್ಟ್ರದ ಬಹುಭಾಗ ಮಳೆಯನ್ನು ಅವಲಂಬಿಸಿದ ಕೃಷಿ ಭೂಮಿ ಹೊಂದಿದ್ದು, ರೈತರು ಬೇರೆ ಬೇರೆ ಮಾರ್ಗಗಳ ಮೂಲಕ ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾರೆ.