ವಾರಣಾಸಿ: ದೇಶದ ಪ್ರಮುಖ ಪುಣ್ಯಕ್ಷೇತ್ರ, ಪುರಾತನ ನಗರ, ಪಾವನ ಧಾಮ ವಾರಣಾಸಿಯಲ್ಲಿ ನಮೋ ಅಲೆ ಮತ್ತೊಮ್ಮೆ ಜೋರಾಗಿ ಬೀಸಿದೆ. ಕಾಲಭೈವೇಶ್ವರನ ಸನ್ನಿಧಿಯಲ್ಲಿ ಕೇಸರಿ ಪಡೆ ದಿಗ್ವಿಜಯ ಸಾಧಿಸಿದ್ದು, ಕಾಶಿ ಜನರು ಮತ್ತೊಮ್ಮೆ ನರೇಂದ್ರ ಮೋದಿ ಅಲೆಗೆ ಕೈಜೋಡಿಸಿದ್ದಾರೆ. ಚುನಾವಣೆ ಕುರುಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಅಜಯ್ ರಾಯ್ಗೆ ಮಣ್ಣು ಮುಕ್ಕಿಸಿರುವ ನಮೋ ಗೆಲುವಿನ ಕೇಕೆ ಹಾಕಿದ್ದಾರೆ.
ವಿಶ್ವವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿದ ನರೇಂದ್ರ ಮೋದಿ!
ವಾರಣಾಸಿಯಲ್ಲಿ ಮೋದಿಗೆ ಗೆಲುವು 2014ರ ಲೋಕಸಭೆಯಲ್ಲಿ ವಾರಣಾಸಿ & ವಡೋದರದಿಂದ ಕಣಕ್ಕೆ ದುಮಕ್ಕಿದ್ದ ಮೋದಿ ಎರಡು ಕಡೆ ಭರ್ಜರಿ ಜಯ ಸಾಧಿಸಿದ್ದರು. ಆದರೆ ಈ ಸಲ ಕಾಶಿ ವಿಶ್ವನಾಥನ ಸನ್ನಿದಿಯಿಂದಲೇ ಮೋದಿ ಅದೃಷ್ಠ ಪರೀಕ್ಷೆಗೆ ಮುಂದಾಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಕೇಸರಿ ಪಡೆ ದಿಗ್ವಿಜಯ
ಕಳೆದ ಲೋಕ ಫೈಟ್ನಲ್ಲಿ ಮೋದಿ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ತೊಡೆತಟ್ಟಿ ನಿಂತಾಗ, ಇಡೀ ದೇಶವೇ ತನ್ನತ್ತ ತಿರುಗಿನೋಡುವಂತೆ ಮಾಡಿತ್ತು ಈ ಕ್ಷೇತ್ರ. ಹೈಪ್ಗೆ ತಕ್ಕಂತೆ ಇಬ್ಬರು ನಾಯಕರೂ ಭರ್ಜರಿ ಪ್ರಚಾರ ನಡೆಸಿದ್ರು. ಆದ್ರೆ, ಮೋದಿ ಅಲೆಯ ಮುಂದೆ ಅರವಿಂದ್ ಕೇಜ್ರಿವಾಲ್ ಅವರ ಆಟ ನಡೆಯಲಿಲ್ಲ. ಕೇಜ್ರಿವಾಲ್ ವಿರುದ್ಧ 3,70,000 ಮತಗಳ ಅಂತರದಲ್ಲಿ ಮೋದಿ ಗೆಲುವು ಸಾಧಿಸಿದ್ರು. ಕೈ ಅಭ್ಯರ್ಥಿ ಅಜಯ್ ರಾಯ್ ಕೇವಲ 75,000 ಮತ ಪಡೆದಿದ್ದರು. ಈ ಸಲವೂ ಎದುರಾಳಿಗಳ ಕೈಗೆ ಸಿಗದ ರೀತಿಯಲ್ಲಿ ಗೆಲುವಿನ ದಿಗ್ವಿಜಯ ಸಾಧಿಸಿದ್ದಾರೆ.
ಈ ಅಂಶಗಳೇ ಕಾರಣವಾದವಾ ಮೋದಿ ಗೆಲುವಿಗೆ?
ವಾರಣಾಸಿ ಕ್ಷೇತ್ರದೊಂದಿಗೆ ಮೋದಿ ವಿಶೇಷ ಸಂಬಂಧ ಇಟ್ಟುಕೊಂಡಿದ್ದರು. ಸುಮಾರು 15 ಬಾರಿ ವಾರಣಾಸಿಗೆ ಭೇಟಿ ನೀಡಿದ್ದರು. ಚುನಾವಣೆಗೂ ಒಂದು ವರ್ಷದಿಂದ ಮುಂಚೆಯೇ ಉತ್ತರ ಪ್ರದೇಶ ಅಭಿವೃದ್ಧಿಗೆ ಮೋದಿ ವಿಶೇಷ ಅನುದಾನ, ನಾನಾ ಯೋಜನೆಗಳ ಶಂಕು ಸ್ಥಾಪನೆ ನೆರವೇರಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಮೋದಿ 2 ದಿನ ಮೀಸಲಿಟ್ಟಿದ್ದರು. ಐತಿಹಾಸಿ ರೋಡ್ ಶೋ, ಗಂಗಾ ಆರತಿ, ನಾಮಪತ್ರ ಸಲ್ಲಿಕೆ ದಿನ ಚೌಕಿದಾರ್ ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲೆಯನ್ನ ಜತೆಗಿಟ್ಟುಕೊಂಡು ಗಮನ ಸೆಳೆದಿದ್ದರು. ಹೀಗಾಗಿ ವಾರಣಾಸಿ ಅವತ್ತು ಇಡಿ ವಿಶ್ವದ ಗಮನ ಸೆಳೆದಿತ್ತು.
ಅಚ್ಚರಿಯ ಬೆಳವಣಿಗೆಯಲ್ಲಿ, ಸಮಾಜವಾದಿ ಪಕ್ಷ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿತ್ತು. ಗಡಿ ಭದ್ರತಾ ಪಡೆ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತದೆ ಎಂದು ಆರೋಪಿಸಿದ್ದ ತೇಜ್ ಬಹದ್ದೂರ್ ಯಾದವ್‌ಗೆ ಟಿಕೆಟ್ ನೀಡಿತ್ತು. ಆದರೆ ಇವರ ನಾಮಪತ್ರ ತಿರಸ್ಕೃತಗೊಂಡಿತ್ತು. ಇತ ಕಾಂಗ್ರೆಸ್ ಕೂಡ ಹಿರಿಯ ಮುಖಂಡ ಅಜಯ್ ರಾಯ್ಗೆ ಮಣೆ ಹಾಕಿ ಕಣಕ್ಕಿಳಿಸಿದ್ರೂ ಪ್ರಯೋಜನವಾಗಿಲ್ಲ.
ಒಟ್ಟಿನಲ್ಲಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ನಮೋ ಸುನಾಮಿ ಮತ್ತೊಮ್ಮೆ ಜೋರಾಗಿ ಬೀಸಿದ್ದು, ಗಂಗಾಮಾತೆಯ ಕೃಪೆಗೆ ಪಾತ್ರರಾಗಿ ಗೆಲುವಿನ ದಿಗ್ವಿಜಯ ಸಾಧಿಸಿದ್ದಾರೆ.