ನವದೆಹಲಿ:ನಾಡಿನೆಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಕನ್ನಡದಲ್ಲಿಯೇ ಶುಭಾಶಯ ಕೋರಿದ್ದಾರೆ.
ಜನನತೆಗೆ ಶುಭ ಕೋರಿರುವ ಮೋದಿ "ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಅಷ್ಟೇ ಅಲ್ಲದೆ ಕೇರಳ ಜನತೆಗೂ ಟ್ವೀಟ್ ಮಾಡಿ ಮೋದಿ ಶುಭಾಶಯ ತಿಳಿಸಿದ್ದಾರೆ. "ಭಾರತದ ಬೆಳವಣಿಗೆಗೆ ಯಾವಾಗಲೂ ಅಳಿಸಲಾಗದ ಕೊಡುಗೆಗಳನ್ನು ನೀಡಿದ ಕೇರಳದ ಜನರಿಗೆ ಕೇರಳ ಪಿರವಿ(ಹುಟ್ಟು)ದಿನದ ಶುಭಾಶಯಗಳು. ಕೇರಳದ ನೈಸರ್ಗಿಕ ಸೌಂದರ್ಯವು ಇದನ್ನು ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದನ್ನಾಗಿ ಮಾಡಿದೆ, ಪ್ರಪಂಚದಾದ್ಯಂತ ಜನರನ್ನು ಸೆಳೆಯುತ್ತದೆ. ಕೇರಳದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಇಂದು ಆಂಧ್ರ ಪ್ರದೇಶ ರಚನಾ ದಿನಾಚರಣೆ ಹಿನ್ನೆಲೆ, ಆಂಧ್ರದ ಜನತೆಗೂ ಮೋದಿ ಶುಭ ಕೋರಿದ್ದಾರೆ. "ಆಂಧ್ರಪ್ರದೇಶವು ಕಠಿಣ ಪರಿಶ್ರಮ ಮತ್ತು ಸಹಾನುಭೂತಿಯ ಸಮಾನಾರ್ಥಕ ಪದವಾಗಿದೆ. ಆಂಧ್ರಕ್ಕೆ ಸೇರಿದ ಜನರು ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಆಂಧ್ರ ಪ್ರದೇಶ ರಚನಾ ದಿನದಂದು, ರಾಜ್ಯದ ಜನರಿಗೆ ಶುಭಾಶಯಗಳು" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಇತ್ತ ಹರಿಯಾಣ, ಛತ್ತೀಸ್ಗಢ, ಮಧ್ಯಪ್ರದೇಶಗಳು ಕೂಡ ಇಂದು ರಾಜ್ಯ ರಚನಾ ದಿನಾಚರಣೆ ಆಚರಿಸುತ್ತಿದ್ದು ಪ್ರಧಾನಿ ಮೋದಿ ಆ ರಾಜ್ಯಗಳಿಗೂ ಶುಭಾಶಯ ತಿಳಿಸಿದ್ದಾರೆ.