ಪಿಥೋರಾಗಢ(ಉತ್ತರಾಖಂಡ):ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ಪರ್ವತಾರೋಹಿಗಳ ಮೃತದೇಹಗಳನ್ನು ನಂದಾ ದೇವಿ ಪ್ರದೇಶದಿಂದ ಮುನ್ಸಾರಿಗೆ ತರಲಾಗಿದೆ. ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪೊಲೀಸರು (ಐಟಿಬಿಪಿ) ಹಿಮದ ರಾಶಿಯ ಕೆಳಗಿದ್ದ ಶವಗಳನ್ನು ಪತ್ತೆ ಹಚ್ಚಿ ಸಾಗಿಸುವ ಕಾರ್ಯ ಮಾಡಿದರು.
ಕಳೆದ ಮೇ 26 ರಂದು ನಂದಾದೇವಿ ಪರ್ವತಾರೋಹಣಕ್ಕೆ ತೆರಳಿದ್ದ ಎಂಟು ಜನರು ಹಿಮಪಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಹೀಗೆ ಮರಣ ಹೊಂದಿದ್ದ ಎಂಟು ಜನರ ಪೈಕಿ ಏಳು ಜನರ ಮೃತ ದೇಹಗಳು ಪತ್ತೆಯಾಗಿದ್ದು, ಹವಾಮಾನ ವೈಪರೀತ್ಯದಿಂದ ಇನ್ನೊಂದು ಮೃತ ದೇಹವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪತ್ತೆಯಾದ ಏಳು ಮೃತ ದೇಹಗಳಲ್ಲಿ ನಾಲ್ಕು ಜನರ ಶವಗಳನ್ನು ಈಗಾಗಲೇ ಮುನ್ಸಾರಿಗೆ ಸಾಗಿಸಲಾಗಿದೆ. ಇನ್ನುಳಿದ ಮೃತದೇಹಗಳನ್ನು ಶೀಘ್ರದಲ್ಲಿ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.