ಕೊಲ್ಹಾಪುರ (ಮಹಾರಾಷ್ಟ್ರ):ವಿಶೇಷ ಆಚರಣೆ ಎಂಬಂತೆ ನವಜಾತ ಶಿಶುವಿನ ನಾಮಕರಣ ಸಮಾರಂಭವನ್ನು ಕೊಲ್ಲಾಪುರದ ಕೋವಿಡ್ ಕೇರ್ ಸೆಂಟರ್ನಲ್ಲಿ ನಿನ್ನೆ/ಗುರುವಾರ ನಡೆಸಲಾಯಿತು.
ನಗರದ ಜೈನ್ ಬೋರ್ಡಿಂಗ್‌ನಲ್ಲಿರುವ ವೈಟ್ ಆರ್ಮಿ ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಅಸೋಸಿಯೇಷನ್‌ನ ಕೋವಿಡ್ ಕೇರ್ ಸೆಂಟರ್ನಲ್ಲಿ 13 ದಿನದ ಮಗುವಿನ ನಾಮಕರಣ ಸಮಾರಂಭ ನಡೆಯಿತು. ಈ ಆಚರಣೆಯ ವಿಶೇಷತೆಯೆಂದರೆ ಕೋವಿಡ್ನಿಂದ ಚೇತರಿಸಿಕೊಂಡ ಎಲ್ಲಾ ಮಹಿಳೆಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು.
ಪ್ರಸ್ತುತ ಮುಂಬೈನ್ನಲ್ಲಿ ನೆಲೆಸಿರುವ ಅಮೃತಾ ಗೌರವ್, ತನ್ನ ಎರಡನೇ ಮಗುವಿಗೆ ಜನ್ನ ನೀಡುವ ಸಲುವಾಗಿ ಕೊಲ್ಲಾಪುರಕ್ಕೆ ಬಂದಿದ್ದರು. ಆರೋಗ್ಯದ ದೃಷ್ಟಿಯಿಂದ ನಗರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುತ್ತಿದ್ದರು. ಸೆ. 3ರಂದು ಅಮೃತಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯೊಂದಕ್ಕೆ ತೆರಳಿದ್ದಾರೆ. ಆದರೆ ಕೋವಿಡ್ ಪರೀಕ್ಷೆ ಮಾಡದೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.
ಸ್ವ್ಯಾಬ್ ಟೆಸ್ಟ್ನಲ್ಲಿ ಅಮೃತಾಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಅಮೃತಾಳನ್ನು ಸಮಾಲೋಚಿಸುತ್ತಿದ್ದ ವೈದ್ಯರೇ ಹೆರಿಗೆ ಮಾಡಿಸಲು ನಿರಾಕರಿಸಿದ್ದಾರೆ. ಹೆರಿಗೆ ನೋವು ಜೋರಾದ ಕಾರಣ ಸ್ಥಳೀಯ ವೈದ್ಯರೊಬ್ಬರು ಆಕೆಯನ್ನು ಹೆರಿಗೆ ಮಾಡಿಸಲು ಒಪ್ಪಿದ್ದು, ಸುಮಾರು ರಾತ್ರಿ ಒಂದು ಗಂಟೆ ವೇಳೆಗೆ ಅಮೃತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆಯಾದ ಬಳಿಕ ಅಮೃತಾರನ್ನು ವೈಟ್ ಆರ್ಮಿ ಮತ್ತು ಮೆಡಿಕಲ್ ಅಸೋಸಿಯೇಶನ್‌ನ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆದು 13ನೇ ದಿನಕ್ಕೆ ಅಮೃತಾ ಚೇತರಿಸಿಕೊಂಡರು. ಇದೀಗ ಅದೇ ಕೋವಿಡ್ ಕೇರ್ ಸೆಂಟರ್ನಲ್ಲಿ ಮಗುವಿಗೆ ಹೆಸರಿಡುವ ಕಾರ್ಯಕ್ರಮ ಆಯೋಜಿಸಿ, ಶುಭ್ರಾ ಎಂದು ಹೆಸರಿಡಲಾಗಿದೆ. ಈ ಸಮಾರಂಭ ಕೋವಿಡ್ ಕೇರ್ ಸೆಂಟರ್ನಲ್ಲಿ ಹಬ್ಬದ ಸಂಭ್ರಮ ತರಿಸಿತ್ತು.