ಅಮರಾವತಿ:ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮಗೊಳಿಸುವ ಆದೇಶದ ನಂತರ, ನಾಯ್ಡು ನಿವಾಸದತ್ತ ಸಿಎಂ ಜಗನ್ ಮೋಹನ್ ರೆಡ್ಡಿ ಕಣ್ಣು ನೆಟ್ಟಿದ್ದಾರೆ ಎನ್ನಲಾಗ್ತಿದೆ.
ವೈಎಸ್ಆರ್ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ವಿಜಯ್ ಸಾಯಿ ರೆಡ್ಡಿ ಹೇಳಿರುವಂತೆ, ನಾಯ್ಡು ಈಗ ವಾಸಿಸುತ್ತಿರುವ ಮನೆ ಅಕ್ರಮವಾಗಿದೆ. ಹಾಗಾಗಿ ಅವರು ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿದ್ದಾರೆ.
ನಾಯ್ಡು ವಾಸಿಸುತ್ತಿರುವ ಈ ಕಟ್ಟಡವೂ ಅಕ್ರಮವಾಗಿ ನದಿ ಪಾತ್ರದಲ್ಲಿ ಕಟ್ಟಿದ್ದಾಗಿದ್ದರೆ, ನೆಲಸಮ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಟ್ವೀಟ್ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ. ನದಿ ಪಾತ್ರದಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ಉರುಳಿಸುವುದಾಗಿ ಈ ಮೊದಲು ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಹೇಳಿದ್ದರು.
ನದಿ ಸಂರಕ್ಷಣೆ ಕಾಯ್ದೆ 1884ಕ್ಕೆ ವಿರುದ್ಧವಾಗಿ ನದಿ ಪಾತ್ರದಲ್ಲಿ ಕಟ್ಟಲಾಗಿದ್ದ ನಾಯ್ಡುರ ಪ್ರಜಾವೇದಿಕೆಯನ್ನು ನೆಲಸಮ ಮಾಡುವಂತೆ ಜಗನ್ ಆದೇಶ ನೀಡಿದ್ರು. ಇದೇ ಕಟ್ಟಡದ ಬಳಿ ನಾಯ್ಡು ಅವರ ಅತಿಥಿ ಗೃಹವಿದೆ. ಇದನ್ನು ಸಹ ಅಕ್ರಮವಾಗಿ ಕಟ್ಟಲಾಗಿದೆ ಎನ್ನಲಾಗ್ತಿದ್ದು, ಜಗನ್ ಸಂಪುಟ ಸಚಿವ ಬೋಟ್ಸಾ ಸತ್ಯಾನಾರಾಯಣ ಸಹ ನೆಲಸಮಗೊಳಿಸುವ ಬಗ್ಗೆ ಮೊದಲು ಹೇಳಿಕೆ ನೀಡಿದ್ದರು.
ಜಗನ್ರ ಈ ನಿರ್ಧಾರಗಳನ್ನು ಟಿಡಿಪಿ ಪಕ್ಷದ ನಾಯಕರು ಖಂಡಿಸಿದ್ದಾರೆ.