ನವದೆಹಲಿ:ದೆಹಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಇದರ ಬೆನ್ನಲ್ಲೇ ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ಅಲ್ಲಿನ ನಾಗರಿಕರಿಗೆ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ. ಈ ಸಂದೇಶದಲ್ಲಿ ಆಮ್ ಆದ್ಮಿ ಪಕ್ಷ ತನ್ನ ನೇತೃತ್ವದ ಸರ್ಕಾರದ ವೇಳೆ ಹೇಗೆ ದೆಹಲಿ ಜನ ಜೀವನವನ್ನು ಸುಂದರವಾಗಿಸಲು ಪ್ರಯತ್ನಿಸಿದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿಡಿಯೋದಲ್ಲಿ ಸಾಧಾರಣದ ಅಂಗಿ ಮೇಲೆ ಸ್ವೆಟರ್ ಧರಿಸಿ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಂಡ ಅವರು ಉತ್ತಮ ಆಡಳಿತಕ್ಕಾಗಿ ಮುಂದೆಯೂ ಕೂಡಾ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ದೆಹಲಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ದೆಹಲಿ ಕದನಕ್ಕೆ ''ಕಾಮನ್ಮ್ಯಾನ್'' ಆದ ಕೇಜ್ರಿವಾಲ್: ವಿಡಿಯೋ ಸಂದೇಶದಲ್ಲಿ ದೆಹಲಿ ನಾಗರಿಕರಿಗೆ ಹೇಳಿದ್ದೇನು..? - ಕಾಮನ್ ಮ್ಯಾನ್ ಕೇಜ್ರಿವಾಲ್
ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಎಲ್ಲ ಪಕ್ಷಗಳು ಕೂಡಾ ತೀವ್ರವಾಗಿ ಮತಪ್ರಚಾರದಲ್ಲಿ ತೊಡಗಿಕೊಂಡಿವೆ. ಅಲ್ಲಿನ ಮುಖ್ಯಮಂತ್ರಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡಾ ವಿಭಿನ್ನವಾಗಿ ಮತಯಾಚನೆ ಮಾಡುತ್ತಿದ್ದಾರೆ.

ಈ ವಿಡಿಯೋದಲ್ಲಿ ಹಣದುಬ್ಬರದ ಬಗ್ಗೆ ಉಲ್ಲೇಖಿಸಿರುವ ಕೇಜ್ರಿವಾಲ್ ''ನಮ್ಮ ಸರ್ಕಾರದ ವೇಳೆ ಹಣದುಬ್ಬರದಿಂದ ದೆಹಲಿ ತತ್ತರಿಸಿತ್ತು. ಈ ವೇಳೆ, ವಿದ್ಯುತ್ ಹಾಗೂ ನೀರಿನ ಬಿಲ್ಗಳನ್ನು ಕಡಿಮೆ ಮಾಡುವ ಮೂಲಕ ಜನರ ಕಷ್ಟ ದೂರ ಮಾಡಿದ್ದೇವೆ. ನಗರದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದ್ದೇವೆ'' ಎಂದು ತಮ್ಮ ಆಮ್ ಆದ್ಮಿ ಸರ್ಕಾರದ ಸಾಧನೆಯನ್ನು ಹೇಳಿಕೊಂಡರು.
ದೆಹಲಿ ನಾಗರಿಕರ ಬಗ್ಗೆ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿದ ಕೇಜ್ರಿವಾಲ್ ''ದೆಹಲಿಯ ಪ್ರತಿ ರಸ್ತೆಯಲ್ಲಿ ಸಿಸಿಟಿವಿಗಳನ್ನು ಹಾಗೂ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಇದೇ ರೀತಿಯ ಕಾಳಜಿ ಮುಂದುರೆಯುತ್ತದೆ'' ಎಂದು ಭರವಸೆ ನೀಡಿದ್ದಾರೆ. ಜೊತೆಗೆ ''ನಾನು ದೆಹಲಿ ಸಿಎಂ ಆಗಿರುವ ತನಕ ವಿದ್ಯುತ್, ನೀರು, ಶಾಲೆ ಹಾಗೂ ಆಸ್ಪತ್ರೆಗಳು ಉಚಿತವಾಗಿರುತ್ತವೆ'' ಎಂಬ ಆಶ್ವಾಸನೆ ನೀಡಿದ್ದಾರೆ.