ನವದೆಹಲಿ: ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಕಾರಣಕ್ಕಾಗಿ ಟಿಎಂಸಿ, ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ 8 ಮಂದಿ ಸದಸ್ಯರನ್ನ ಒಂದು ವಾರ ಅಮಾನತುಗೊಳಿಸಲಾಗಿದ್ದು, ಇದಕ್ಕೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಗದ್ದಲ ಮಾಡಿದ್ದಕ್ಕೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು 8 ಮಂದಿ ಸದಸ್ಯರನ್ನ ಅಮಾನತು ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಆರಂಭದಲ್ಲಿ ಸಂಸದರು ಮಾತನಾಡುವುದರ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ರಾಜ್ಯಸಭೆಯಿಂದಲೇ ಅಮಾನತು ಮಾಡಲಾಗಿದೆ. ನೂತನ ಕೃಷಿ ಕಾನೂನು ಕುರಿತಂತೆ ರೈತರ ಬಗ್ಗೆ ಕಳವಳ ಹೊಂದಿರದವರು ಕಣ್ಮುಚ್ಚಿ ಕುಳಿತು ಈ ಮಸೂದೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ದುರಂಹಕಾರದ ಆಡಳಿತದಿಂದ ಇಡೀ ದೇಶದ ಆರ್ಥಿಕತೆಗೆ ಇದೀಗ ವಿಪತ್ತು ಬಂದಿದೆ. ಪ್ರಜಾಪ್ರಭುತ್ವದ ದನಿ ಹತ್ತಿಕ್ಕುವ ಕೆಲಸ ಮುಂದುವರೆದಿದೆ ಎಂದಿದ್ದಾರೆ.
ಸಂಸತ್ತಿನಲ್ಲಿ ರೈತರ ಪರ ಧ್ವನಿ ಎತ್ತುವುದು ಪಾಪವೇ? ಸರ್ವಾಧಿಕಾರಿಗಳು ಸಂಸತ್ತನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆಯೇ? ಎಂದು ಕಾಂಗ್ರೆಸ್ ವಕ್ತಾರ ಸುರ್ಜೇವಾಲ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಅಮಾನತುಗೊಂಡವರಲ್ಲಿ ಮೂವರು ಕಾಂಗ್ರೆಸ್ ಸದಸ್ಯರಾಗಿದ್ದಾರೆ.
ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ. ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.