ಮಸ್ಸೂರಿ(ಉತ್ತರಾಖಂಡ):ಮಸ್ಸೂರಿಯ ಜನಪ್ರಿಯ ಪ್ರವಾಸಿ ತಾಣ ಗನ್ ಹಿಲ್ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಅನೇಕ ವರ್ಷಗಳ ಹಿಂದೆ, ಸ್ವಾತಂತ್ರ್ಯದ ಮೊದಲು, ಜನರು ತಮ್ಮ ಕೈಗಡಿಯಾರಗಳನ್ನು ಹೊಂದಿಸಲು ಈ ಬೆಟ್ಟದ ಮೇಲಿರುವ ಫಿರಂಗಿಗಳನ್ನು ಹಾರಿಸುತ್ತಿದ್ದರಂತೆ. ಹೀಗೆ ಫಿರಂಗಿಗಳನ್ನು ಹಾರಿಸುವ ಕಾರಣಕ್ಕೆ ಈ ಬೆಟ್ಟಕ್ಕೆ ಗನ್ ಹಿಲ್ ಎಂಬ ಹೆಸರು ಬಂದಿತು ಎಂಬ ಪ್ರತೀತಿ ಇದೆ.
ಅಂದು ಗಡಿಯಾರವನ್ನು ಹೊಂದಿದ್ದ ಶ್ರೀಮಂತರ ಕಥೆ ಇದು. ಪಟ್ಟಣದ ಕೆಲವೇ ಕೆಲವು ಪ್ರಖ್ಯಾತ ಜನರು ಗಡಿಯಾರವನ್ನು ಹೊಂದಿದ್ದರು. ಈ ಕೈಗಡಿಯಾರಗಳ ಸಮಯವನ್ನು ನಿಗದಿಪಡಿಸಲು ಬ್ರಿಟಿಷರು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದರು.
ಗತಕಾಲದ ಕಥೆ ನೆನಪಿಸುವ ಗನ್ಹಿಲ್ ಪಟ್ಟಣದ ಮಧ್ಯಭಾಗದಲ್ಲಿರುವ ಬೆಟ್ಟದ ಮೇಲಿರುವ ಫಿರಂಗಿಯಿಂದ ಜನರು ತಮ್ಮ ಕೈಗಡಿಯಾರಗಳ ಸಮಯವನ್ನು ಸಿಂಕ್ರೊನೈಸ್ ಮಾಡಲು ಸಾಧ್ಯವಾಗುವಂತೆ ಹುಲ್ಲಿನ ಚೆಂಡುಗಳನ್ನು ಹಾರಿಸಲಾಗುತ್ತಿತ್ತು. ಹೀಗಿರುವಾಗ ಬ್ರಿಟಿಷ್ ಮಹಿಳೆಯೊಬ್ಬರ ಮೇಲೆ ಒಂದು ಫಿರಂಗಿ ಚೆಂಡು ಬಿದ್ದು ಪಟ್ಟಣದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಳಿಕ ಈ ಪದ್ಧತಿಗೆ ಅಂತ್ಯ ಹಾಡಲಾಯಿತು.
ಇಂದು ಯಾವುದೇ ಫಿರಂಗಿ ಗನ್ಹಿಲ್ನಲ್ಲಿ ಇಲ್ಲ. ಆದರೆ ಬೆಟ್ಟವನ್ನು ಈಗಲೂ ಗನ್ ಹಿಲ್ ಎಂದೇ ಕರೆಯಲಾಗುತ್ತದೆ. ಜನರು ಇನ್ನೂ ಫಿರಂಗಿಯ ದಂತಕಥೆಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ನಿಧಾನವಾಗಿ ಜನರು 'ಗನ್' ಬೆಟ್ಟಕ್ಕೆ ಸಂಬಂಧಿಸಿದ ಕಥೆಗಳು ಮತ್ತು ಉಪವ್ಯಾಖ್ಯಾನಗಳನ್ನು ಮರೆಯಲು ಪ್ರಾರಂಭಿಸಿದ್ದಾರೆ ಎಂಬುದು ಸ್ಥಳೀಯರ ಕಳವಳವಾಗಿದೆ.
ಆದ್ದರಿಂದ, ಇಂತಹ ಪಾರಂಪರಿಕ ತಾಣಗಳನ್ನು ಅವುಗಳ ನೈಸರ್ಗಿಕ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ಅವುಗಳ ಇತಿಹಾಸವನ್ನೂ ಸರ್ಕಾರಗಳು ಕಾಪಾಡುವುದು ಬಹಳ ಮುಖ್ಯ ಎಂಬುದು ಗ್ರಾಮಸ್ಥರ ಮಾತಾಗಿದೆ.