ದೆಹಲಿ:ದೇಶದಲ್ಲಿ ಮುಸ್ಲಿಮರು ಕೊರೊನಾ ವೈರಸ್ ಹರಡುತ್ತಿದ್ದಾರೆ ಎಂಬ ಆರೋಪಗಳು ಕೇವಲ ಗ್ರಹಿಕೆ ಅಷ್ಟೇ, ಅದು ವಾಸ್ತವವಲ್ಲ. ಮುಸ್ಲಿಮರು ಕೂಡ ನಮ್ಮ ಸಮಾಜದ ಒಂದು ಭಾಗವಾಗಿದ್ದಾರೆ ಎಂದು ಆರ್‌ಎಸ್‌ಎಸ್ ಹೇಳಿದೆ.
ಯಾರೋ ಕೆಲವರು ಮಾಡುವ ಕೆಲಸದಿಂದಾಗಿ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಈ ರೀತಿ ಮಾಡಿದರೆ ಜನರಲ್ಲಿ ತಪ್ಪು ಗ್ರಹಿಕೆ ಉಂಟಾಗುತ್ತದೆ. ಭಾರತದಲ್ಲಿ ಮುಸ್ಲಿಮರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ಸಮಾಜ ಸಾಕಷ್ಟು ಕಾಳಜಿ ಹೊಂದಿದೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ(ಸಹ ಸರಕಾರ್ಯವಾಹ್) ದತ್ತಾತ್ರೇಯ ಹೊಸಬಾಳೆ ರಾಷ್ಟ್ರೀಯ ಮಾಧ್ಯಮಗಳ ಸಂವಾದದ ವೇಳೆ ಹೇಳಿದ್ದಾರೆ.
ಕೆಲವರು ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದು ಸರಿಯಾದ ಕ್ರಮವಲ್ಲ ಎಂದು ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲೇ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಯಾರನ್ನೂ ದೂಷಿಸುವುದು ಸರಿಯಾದ ಮನೋಭಾವವಲ್ಲ. ಈಗೇನಿದ್ದರೂ ಎಲ್ಲರೂ ಒಗ್ಗಟ್ಟಾಗಿ ವೈರಸ್ ವಿರುದ್ಧ ಹೋರಾಡಬೇಕು. ಯಾರಾದರೂ ಈ ರೀತಿಯ ಗ್ರಹಿಕೆಗಳನ್ನು ಸೃಷ್ಟಿಸುತ್ತಿದ್ದರೆ ಅದು ಸ್ವೀಕಾರರ್ಹವಲ್ಲ ಎಂದು ಮಾದ್ಯದವರ ಪ್ರಶ್ನೆಗೆ ಉತ್ತರಿಸಿದರು.
ಏನೆಂದರೆ ದುರದೃಷ್ಟಕರ ರೀತಿಯಲ್ಲಿ ಸಮಾಜದಲ್ಲಿ ಈರೀತಿಯ ತಪ್ಪು ಗ್ರಹಿಕೆ ಸೃಷ್ಟಿಯಾಗಿದೆ. ಇಂತಹ ದುರದೃಷ್ಟಕರ ಘಟನೆಗಳನ್ನು ಸಾಮಾನ್ಯೀಕರಿಸಲು ಹೋಗಬಾರದು ಎಂದ ಅವರು, ಭಾರತದಲ್ಲಿ ಮುಸ್ಲಿಮರ ಕಲ್ಯಾಣಕ್ಕಾಗಿ ಸರ್ಕಾರ ಹಾಗೂ ಸಮಾಜ ಸಾಕಷ್ಟು ಶ್ರಮಿಸುತ್ತಿದೆ. ಅಲ್ಲದೇ ಆರ್‌ಎಸ್‌ಎಸ್ 130 ಕೋಟಿ ಭಾರತೀಯರ ಬಗ್ಗೆ ಮಾತನಾಡುವುವಾಗ ಯಾವುದೇ ಧರ್ಮ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದರು.
ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರದ ಜೊತೆ ಆರ್‌ಎಸ್‌ಎಸ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಪ್ರಶ್ನೆಗೆ, ಇದು ಕೇವಲ ಸರ್ಕಾರದ ಕೆಲಸವಲ್ಲ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಸಮಾಜ ಮತ್ತು ಸರ್ಕಾರ ಎರಡು ಒಟ್ಟಾಗಿ ನಿಂತು ಕಾರ್ಯನಿರ್ವಹಿಸುತ್ತದೆ ಎಂದರು.