ರಾಮ್ಗರ್( ಉತ್ತರಪ್ರದೇಶ):ದೇಶದಲ್ಲಿ ನಿರ್ದಿಷ್ಟ ಕಾರಣಗಳಿಂದಾಗಿ ಹಿಂದೂ - ಮುಸ್ಲಿಮರ ನಡುವಿನ ಅಂತರ ಹೆಚ್ಚಾಗುತ್ತಿರುವ ನಡುವೆಯೂ ಕೆಲವೊಂದು ಮಾನವೀಯ ಕಾರ್ಯಗಳು ಮತ್ತೆ ಮತ್ತೆ ಸೌಹಾರ್ದತೆ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಿವೆ. ಕೊರೊನಾ ವೈರಸ್ ಆವರಿಸಿಕೊಂಡ ಬಳಿಕ ಹಿಂದೂಗಳ ಅಂತ್ಯ ಕ್ರಿಯೆ ಮುಸಲ್ಮಾನರು, ಮುಸ್ಲಿಮರ ಧಪನ ಹಿಂದೂಗಳು ನಡೆಸಿದ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು : ಮಾನವೀಯ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೂರ - ರಾಮ್ಗರ್ನಲ್ಲಿ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು
ಮುಸ್ಲಿಂ ಯುವಕರ ತಂಡವೊಂದು ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಮತ್ತೊಂದು ಮಾನವೀಯ ಕಾರ್ಯಕ್ಕೆ ರಾಮ್ಗರ್ ಸಾಕ್ಷಿಯಾಗಿದ್ದು, ಯುವಕರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
![ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು : ಮಾನವೀಯ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೂರ muslim men did last rites of hindu women in ramgarh](https://etvbharatimages.akamaized.net/etvbharat/prod-images/768-512-7633261-644-7633261-1592278400682.jpg)
ನಗರದ ದುಸಾದ್ ಮೊಹಲ್ಲಾದಲ್ಲಿ ಅಂತಹುದ್ದೇ ಒಂದು ಮಾನವೀಯ ಕಾರ್ಯ ನಡೆದಿದ್ದು, ಯಾರು ಏನೇ ಹೇಳಿದರೂ ನಮ್ಮೊಳಗಿನ ಸೌಹಾರ್ದ ಭಾವವನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ಕೆಲವೊಂದು ಯುವಕರು ತೋರಿಸಿಕೊಟ್ಟಿದ್ದಾರೆ. ಮೊಹಲ್ಲಾದ ಹಿಂದೂ ಮಹಿಳೆಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೊರೊನಾ ಸಂದರ್ಭವಾಗಿದ್ದರಿಂದ ಯಾವೊಬ್ಬ ಸಂಬಂಧಿಕನೂ ಮಹಿಳೆ ಅಂತ್ಯಕ್ರಿಯೆ ನಡೆಸಲು ಮುಂದೆ ಬಂದಿಲ್ಲ. ಏನು ಮಾಡಬೇಕು ಎಂದು ದಾರಿ ತೋಚದೇ ಮಹಿಳೆಯ ಮಗ ಪುರುಷೋತ್ತಮ ಎಂಬುವರು ಪಕ್ಕದ ಮುಸ್ಲಿಂ ಸ್ನೇಹಿತರಿಗೆ ತನ್ನ ಅಳಲನ್ನು ತೋಡಿಕೊಂಡಿದ್ದರು. ಈ ವೇಳೆ, ಕಾರ್ಯ ಪ್ರವೃತ್ತರಾದ ಯುವಕರ ತಂಡ, ಮಹಿಳೆಯ ಮೃತ ದೇಹವನ್ನು ಹೆಗಲ ಮೇಲೆ ಹೊತ್ತು ಎರಡು ಕಿ.ಮೀ ದೂರದ ದಾಮೋದರ್ ನದಿ ಬಳಿಯ ಮುಕ್ತಿದಾಮಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಮಗ ಪುರುಷೋತ್ತಮ್ ತಾಯಿಯ ಅಂತ್ಯ ಕ್ರಿಯೆಯನ್ನು ವಿಧಿ ವಿಧಾನಗಳ ಪ್ರಕಾರ ನಡೆಸಿದ್ದಾರೆ.
ಮೊಹಮ್ಮದ್ ಇಮ್ರಾನ್ , ಮೊಹಮ್ಮದ್ ಆದಿಲ್, ಮೊಹಮ್ಮದ್ ಶಹನವಾಜ್ , ಮೊಹಮ್ಮದ್ ಶಮಿ ಎಂಬ ನಾಲ್ವರು ಯುವಕರು ಈ ಮಾನವೀಯ ಕಾರ್ಯ ಮಾಡಿದವರು. ಯುವಕರ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಿಂದ ಪ್ರಶಂಸೆಗಳು ವ್ಯಕ್ತವಾಗಿವೆ.