ತಿರುವನಂತಪುರಂ (ಕೇರಳ) :24 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತನೋರ್ವನನ್ನ ಕೊಂದ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳ ವಿವಾಹದಲ್ಲಿ ಪಾಲ್ಗೊಂಡಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳುಸ್ಪಷ್ಟನೆ ನೀಡುವಂತೆ ಬಿಜೆಪಿ ಆಗ್ರಹಿಸಿದೆ.
24 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತ ಒಟ್ಟಾಪಿಲಾವ್ ಸುರೇಶ್ ಬಾಬು ಎಂಬಾತನ್ನು ಮುಹಮ್ಮದ್ ಹಾಶಿಮ್ ಕೊಲೆಗೈದಿದ್ದ. ಪೆರೋಲ್ ಮೇಲೆ ಅಪರಾಧಿ ಹೊರಬಂದು ಸಿಎಂ ಅಧಿಕೃತ ನಿವಾಸದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದಾರೆಯೇ ಎಂದು ಮುಖ್ಯಮಂತ್ರಿ ವಿಜಯನ್ ಸ್ಪಷ್ಟಪಡಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಸಂದೀಪ್ ವಾರಿಯರ್ ಫೇಸ್‌ಬುಕ್ ಪೋಸ್ಟ್ವೊಂದರಲ್ಲಿ ತಿಳಿಸಿದ್ದಾರೆ.
ಸಿವಿಐ(ಎಂ) ಯುವ ಮುಖಂಡ ಮತ್ತು ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಪಿ ಎ ಮೊಹಮ್ಮದ್ ರಿಯಾಸ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ಮಗಳು ವೀಣಾ ಮದುವೆಯಲ್ಲಿ ಕ್ಲಿಕ್ಕಿಸಲಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದೆ. ಈ ಫೋಟೋದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೊಳಗಾದ ಹಾಗೂ ಪ್ರಸ್ತುತ ಪೆರೋಲ್ ಮೇಲೆ ಹೊರ ಬಂದಿರುವ ಮುಹಮ್ಮದ್ ಹಾಶಿಮ್, ನವಜೋಡಿಗಳೊಂದಿಗೆ ನಿಂತಿರುವ ಫೋಟೋ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿವೆ.
ಮುಖ್ಯಮಂತ್ರಿಯ ಅಧಿಕೃತ ನಿವಾಸವಾದಲ್ಲಿ ಈ ವಿವಾಹ ನಡೆದಿದ್ದು, 50ಕ್ಕೂ ಕಡಿಮೆ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರುಗಳು ಮಾತ್ರ ಈ ಮದುವೆಯಲ್ಲಿ ಹಾಜರಾಗಿದ್ದಾರೆ. ಈ ಸಮಾರಂಭದಲ್ಲಿ ಹಾಜರಿದ್ದ ವರನ ಕುಟುಂಬ ಸದಸ್ಯರ ಪೈಕಿ ಹಾಶಿಮ್ ಕೂಡ ಓರ್ವನಾಗಿದ್ದಾನೆ. ಈತ ರಿಯಾಸ್ನ ಆಪ್ತ ಹಾಗೂ ಹತ್ತಿರದ ಸಂಬಂಧಿ ಎನ್ನಲಾಗಿದೆ.
ಸಿಎಂ ಅವರ ಅಧಿಕೃತ ನಿವಾಸದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪೆರೋಲ್ ಆಧಾರದ ಮೇಲೆ ಜೈಲಿನಿಂದ ಹೊರಬಂದ ಅಪರಾಧಿ ಹಾಜರಿದ್ದಾರೆಯೇ ಎಂದು ಮುಖ್ಯಮಂತ್ರಿ ಉತ್ತರಿಸಬೇಕು ಎಂದು ಬಿಜೆಪಿ ವಕ್ತಾರರು ಆಗ್ರಹಿಸಿದ್ದಾರೆ. 24 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತ ಒಟ್ಟಾಪಿಲಾವ್ ಸುರೇಶ್ ಬಾಬು ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಹಶೀಮ್ ಪ್ರಕರಣವನ್ನು ಈ ಹಿಂದೆ ಖುಲಾಸೆಗೊಳಿಸಿತ್ತು. ಆದರೆ, ಸುಪ್ರೀಂಕೋರ್ಟ್ 2017ರಲ್ಲಿ ಹಶೀಂಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.