ಬನಸ್ಕಂತ ( ಗುಜರಾತ್ ) :ಮಾತು ಬಾರದ, ಕಿವಿ ಕೇಳಿಸದ ಅಪ್ರಾಪ್ತೆಯನ್ನು ಸಂಬಂಧಿಯೇ ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆಗೈದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆಯಾದ ಬಾಲಕಿಯ ಸಂಬಂಧಿ ನಿತಿನ್ ಮಲೈ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬಾಲಕಿಯನ್ನು ಜಿಲ್ಲೆಯ ಡೀಸಾದ ನಿವಾಸದಿಂದ ಅಪಹರಿಸಿದ್ದ. ಬಾಲಕಿ ಕಾಣೆಯಾದಾಗ ರಾತ್ರಿಯಿಡೀ ಹುಡುಕಿದ ಆಕೆಯ ಮನೆಯವರು, ಬೆಳಿಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿ ತನಿಖೆ ನಡೆಸಿದ ಪೊಲೀಸರಿಗೆ, ಬಾಲಕಿಯನ್ನು ಅಪರಿಚಿತ ಯುವಕ ಅಪಹರಿಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿರುವಾಗಲೇ, ಜಿಲ್ಲೆಯ ಧಾಂತಿವಾಡ ತಾಲೂಕು ಭಕ್ಹರ್ ಗ್ರಾಮದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆರೋಪಿ ಬಾಲಕಿಯನ್ನು ಕತ್ತುಕೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದು, ದೇಹ ಒಂದು ಕಡೆ ತಲೆ ಒಂದು ಕಡೆ ಪತ್ತೆಯಾಗಿದೆ.
ಮೃತದೇಹ ಪತ್ತೆಯಾದ ಸ್ಥಳಕ್ಕೆ ತಲುಪಿದ ಕುಟುಂಬಸ್ಥರು, ಕಿವಿ ಕೇಳದ, ಮಾತು ಬಾರದ ಮುಗ್ದ ಬಾಲಕಿಯ ಹತ್ಯೆ ಕಂಡು ಆಘಾತಕ್ಕೊಳಗಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶ್ವಾನದಳದ ಸಹಾಯದೊಂದಿಗೆ ಘಟನೆ ನಡೆದ ಒಂದು ಘಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದಿರುವುದಾಗಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಹತ್ಯೆಯಾದ ಬಾಲಕಿಯ ಸಂಬಂಧಿ ಎಂದು ತಿಳಿದು ಬಂದಿದೆ.
ಎಫ್ಎಸ್ಎಲ್ ತಂಡ ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ರಾಜುಲ್ಬೆನ್ ದೇಸಾಯಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.