ಮುಂಬೈ:ನಿನ್ನೆಯವರೆಗೆ ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇಂದು ಮಳೆಯ ತೀವ್ರತೆ ಕಡಿಮೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.
ಮುಂಬೈ ಸುತ್ತಮುತ್ತ ಕವಿದ ಮೋಡದ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ ಎಂದು ಐಎಂಡಿ ತಿಳಿಸಿದೆ. ನಿನ್ನೆ ದಕ್ಷಿಣ ಮುಂಬೈನ ಕೊಲಾಬಾ ವೀಕ್ಷಣಾಲಯದಲ್ಲಿ ಬೆಳಗ್ಗೆ 8.30ರಿಂದ ರಾತ್ರಿ 8.30ರವರೆಗೆ 293 ಮಿ.ಮೀ ಮಳೆ ದಾಖಲಾಗಿದೆ.
"ಮುಂಬೈನ ಡಾಪ್ಲರ್ ಹವಾಮಾನ ರಾಡರ್ ಮೋಡದ ದ್ರವ್ಯರಾಶಿಯಲ್ಲಿ ಸ್ವಲ್ಪ ಕಡಿತವನ್ನು ತೋರಿಸುತ್ತಿದೆ." ಎಂದು ಮುಂಬೈನ ಐಎಂಡಿ ಉಪ ಮಹಾನಿರ್ದೇಶಕ ಕೆ ಎಸ್ ಹೊಸಾಲಿಕರ್ ಹೇಳಿದ್ದಾರೆ.
ಕೆಲವೆಡೆ ಹೈ ಅಲರ್ಟ್
ಮುಂಬೈ, ರಾಯ್‌ಗಡ್, ಪಾಲ್ಘರ್, ಥಾಣೆ ಹಾಗೂ ಇತರ ಸ್ಥಳಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರತ್ನಗಿರಿ, ಸಿಂಧುದುರ್ಗ್, ಪುಣೆ, ಕೊಲ್ಹಾಪುರ ಮತ್ತು ಸತಾರಾ ಜಿಲ್ಲೆಗಳಿಗೆ ಕಿಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಠಾಕ್ರೆಗೆ ಪ್ರಧಾನಿ ಫೋನ್: ಎಲ್ಲ ನೆರವಿನ ಭರವಸೆ
ಈ ನಡುವೆ ಮುಂಬೈನಲ್ಲಿನ ಮಳೆಯ ಪರಿಸ್ಥಿತಿ ಬಗ್ಗೆ ಅಲ್ಲಿನ ಸಿಎಂ ಉದ್ದವ್ ಠಾಕ್ರೆ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮುಂಬೈ ಮತ್ತು ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ಆಗುತ್ತಿರುವ ಮಳೆ ಬಗ್ಗೆ ಮಾಹಿತಿ ಪಡೆದರು. ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಭರವಸೆಯನ್ನೂ ನೀಡಿದರು.
ಭಾರಿ ಮಳೆಯಿಂದಾಗಿ ಮುಂಬೈ ಮಹಾನಗರ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. ಕೊರೊನಾದಿಂದ ಈಗಾಗಲೇ ಕಂಗೆಟ್ಟಿರುವ ಮುಂಬೈ ಮಹಾನಗರಿ ಈಗ ಮಹಾ ಮಳೆಯಿಂದ ಮತ್ತಷ್ಟು ಕಂಗಾಲಾಗಿದೆ.