ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ವಿರುದ್ಧ ಮುಂಬೈ ತನ್ನ ಹೋರಾಟವನ್ನು ಮುಂದುವರೆಸುತ್ತಿದೆ. ಇಂತ ಪರಿಸ್ಥಿತಿಯಲ್ಲಿ ಅನೇಕ ಮಂದಿ ಸರ್ಕಾರಕ್ಕೆ ನೆರವಾಗುತ್ತಿದ್ದಾರೆ.
ಮುಂಬೈ ಮೂಲದ ಬಿಲ್ಡರ್ ಒಬ್ಬರು ಹೊಸದಾಗಿ ನಿರ್ಮಿಸಿದ 19 ಅಂತಸ್ತಿನ ಕಟ್ಟಡವನ್ನು ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ಹಸ್ತಾಂತರಿಸಿದ್ದಾರೆ.
ಶೀಜಿ ಶರಣ್ ಡೆವಲಪರ್ಸ್‌ನ ಮೆಹುಲ್ ಸಂಘ್ವಿ, 'ಬಾಡಿಗೆದಾರರೊಂದಿಗೆ ಚರ್ಚಿಸಿದ ನಂತರ ನಾವು ಸ್ವಇಚ್ಛೆಯಿಂದ ಇಂತಾ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಕಟ್ಟಡವನ್ನು ಕೋವಿಡ್-19 ರೋಗಿಗಳಿಗಾಗಿ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ' ಎಂದು ಹೇಳಿದ್ದಾರೆ.
ಮಲಾಡ್‌ನ ಎಸ್‌ವಿ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿ 130 ಫ್ಲ್ಯಾಟ್‌ಗಳಿವೆ. ನೂತನವಾಗಿ ನಿರ್ಮಾಣವಾದ ಈ ಕಟ್ಟಡ ಮಾಲೀಕರಿಗೆ ಹಸ್ತಾಂತರಿಸಲು ಸಿದ್ಧವಾಗಿತ್ತು. ಆದರೆ ಕಟ್ಟಡ ಮಾಲೀಕರು ಫ್ಲ್ಯಾಟ್ ಖರೀದಿಸಿದವರೊಂದಿಗೆ ಚರ್ಚೆ ನಡೆಸಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ಗೆ ಕಟ್ಟಡ ಹಸ್ತಾಂತರಿಸಿದ್ದಾರೆ.
ಇಲ್ಲಿಯವರೆಗೆ, 300 ರೋಗಿಗಳನ್ನು ಈ ಕಟ್ಟಡಕ್ಕೆ ವರ್ಗಾಯಿಸಲಾಗಿದ್ದು, ಒಂದು ಫ್ಲಾಟ್‌ಗೆ ನಾಲ್ಕು ರೋಗಿಗಳನ್ನು ವರ್ಗಾಯಿಸಲಾಗಿದೆ. ಕಟ್ಟಡದ ಆವರಣದಲ್ಲಿ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.