ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಸ್ಟೇಷನ್ ಟರ್ಮಿನಲ್ನ ಪ್ಲಾಟ್ಫಾರ್ಮ್ 1ರಲ್ಲಿನ ಬಿಡ್ಜ್ವೊಂದರ ದಿಢೀರ್ ಕುಸಿತದಿಂದ ಐವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈನಲ್ಲಿ ಬ್ರಿಡ್ಜ್ ಕುಸಿತ ಇಂದು ಸಂಜೆ ಈ ಬ್ರಿಡ್ಜ್ ಕುಸಿದ ಕಾರಣ ಹಲವರು ಅದರಡಿ ಸಿಲುಕಿಕೊಂಡಿದ್ದರು. ಘಟನೆಯಲ್ಲಿ 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಮುಂಬೈನ ಆರ್ಆರ್ಸಿಯ ಒಂದು ತಂಡ ಹಾಗೂ ಅಗ್ನಿಶಾಮಕ ದಳದವರು ಘಟನೆಯ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಸಾವನ್ನಪ್ಪಿದವರನ್ನು ಜಾಹಿದ್ ಶಿರಾಜ್ ಖಾನ್(32), ಅಪೂರ್ವ ಪ್ರಭು(35)ಮತ್ತು ರಂಜನಾ ತಾಂಬೆ(40) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿರುವವರೆಗೆ ಸಿಎಂ ಪಡ್ನವೀಸ್ 5ಲಕ್ಷ ರೂ ಪರಿಹಾರ ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಇತ್ತ ಘಟನೆಗೆ ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ತೀವ್ರ ಸಂತಾಸ ಸೂಚಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಅನೇಕರ ಸ್ಥಿತಿ ಗಂಭೀರವಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.