ನವದೆಹಲಿ :ನಾಳೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಭೇಟಿ ನೀಡುವ ಗಣ್ಯರಿಗೆ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಪೊಲೀಸರು ಬಹು -ಹಂತದ ಭದ್ರತಾ ರಕ್ಷಣಾ ಗೋಡೆಯನ್ನೇ ಇಡಲಿದ್ದಾರೆ. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ), ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯಂತಹ ಇತರ ಘಟಕಗಳೊಂದಿಗೆ ಅಗತ್ಯ ಸಂಪರ್ಕ ಮತ್ತು ಪೂರ್ವಾಭ್ಯಾಸ ಮಾಡಲಾಗಿದೆ. ಎಲ್ಲ ಏಜೆನ್ಸಿಗಳು ಸಮನ್ವಯದಿಂದ ಭದ್ರತೆಯ ಬಗ್ಗೆ ನಿಗಾವಹಿಸಲಿವೆ.
ಸ್ವಾಟ್ ತಂಡಗಳನ್ನು ವಿಶೇಷವಾಗಿ ಸಕ್ರಿಯಗೊಳಿಸಲಾಗುವುದು. ದೆಹಲಿ ಪೊಲೀಸರ ಮುಖ ಗುರುತಿಸುವಿಕೆಯ ವ್ಯವಸ್ಥೆ (Facial Recognition System) ಅನ್ನು ಶಂಕಿತರ ಗುರುತಿಸುವಿಕೆಗಾಗಿ ವಾಂಟೇಜ್ ಪಾಯಿಂಟ್‌ಗಳಲ್ಲಿ ಅಳವಡಿಸಲಾಗುವುದು.
ಜನವರಿ 26 ರಂದು ರಾಜಪಥದಿಂದ ಕೆಂಪು ಕೋಟೆಗೆ 8 ಕಿ.ಮೀ ಉದ್ದದ ಪೆರೇಡ್ ಮಾರ್ಗದಲ್ಲಿ ನಿಗಾ ವಹಿಸಲು ಶಾರ್ಪ್‌ಶೂಟರ್ ಮತ್ತು ಸ್ನೈಪರ್‌ಗಳನ್ನು ಎತ್ತರದ ಕಟ್ಟಡಗಳ ಮೇಲೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ಸುಗಮವಾಗಿ ಸಾಗಲು, ಪ್ರೇಕ್ಷಕರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ 2,000 ಕ್ಕೂ ಹೆಚ್ಚು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೆಹಲಿ ಪೊಲೀಸರ ಸೂಚನೆಯಂತೆ, ಭದ್ರತಾ ವ್ಯವಸ್ಥೆಗಳ ಭಾಗವಾಗಿ ದೆಹಲಿ ಮೆಟ್ರೋದ ಸೇವೆಗಳನ್ನು ಭಾನುವಾರ ಭಾಗಶಃ ಮೊಟಕುಗೊಳಿಸಲಾಗುವುದು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.