ನವದೆಹಲಿ: ಗಣಿತದಲ್ಲಿ ಎಂಎಸ್ಸಿ ಪದವಿ ಪಡೆದ ವಿದ್ಯಾರ್ಥಿ ಮದ್ರಾಸ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಸ್ವೀಪರ್ ಕೆಲಸ ಪಡೆಯುತ್ತಾನೆ ಎಂದು ಡಿಎಂಕೆ ನಾಯಕ ಎ ರಾಜಾ ಸಂಸತ್ನಲ್ಲಿ ಪ್ರಶ್ನೆ ಇಟ್ಟರು.
ಪ್ರಶ್ನಾವಳಿ ಸಮಯದಲ್ಲಿ ನಿರುದ್ಯೋಗ ಸಂಬಂಧ ಚರ್ಚೆ ನಡೆಯಿತು. ಈ ವೇಳೆ ಡಿಎಂಕೆ ನಾಯಕ ಎ ರಾಜಾ ಮಾತನಾಡಿ, ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಎಂಬಿಎ ಪದವಿ ಪಡೆದವ ತನ್ನ ಶಿಕ್ಷಣಕ್ಕೆ ತಕ್ಕಂತೆ ಕೆಲಸ ಸಿಗದೇ ರೈಲ್ವೆ ಇಲಾಖೆಯಲ್ಲಿ ಖಲಾಸಿ ಉದ್ಯೋಗವನ್ನು ಪಡೆಯಲು ಮುಂದಾಗುತ್ತಿದ್ದಾನೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಸಂತೋಷ್ ಕುಮಾರ್ ಗಂಗ್ವಾರ್, ಉದ್ಯೋಗ ನೀಡಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ನಿರುದ್ಯೋಗ ನಿರ್ಮೂಲನೆ ಮಾಡಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಅಡೂರ್ ಪ್ರಕಾಶ್ ಅವರು ದೇಶದಲ್ಲಿ ನೋಂದಾಯಿತ ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆ ಇದೆಯೇ ಎಂದು ಕೇಳಿದಾಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಗಂಗ್ವಾರ್, 2015, 2016 ಮತ್ತು 2017 ರ ಅವಧಿಯಲ್ಲಿ ಕ್ರಮವಾಗಿ 4.35 ಕೋಟಿ, 4.34 ಕೋಟಿ ಮತ್ತು 4.24 ಕೋಟಿ ನೋಂದಣಿ ಆಗಿದೆ ಎಂದು ಎಂದು ಲಿಖಿತ ಉತ್ತರದಲ್ಲಿ ತಿಳಿಸಿದರು.