ಹೈದರಾಬಾದ್: ಬಿಹಾರದ ಚುನಾವಣೆ ಜತೆಗೆ ಇಂದು 10 ರಾಜ್ಯಗಳ ಉಪಚುನಾವಣೆ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು, ಪ್ರಮುಖ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲು ಹಾಕಿದೆ.
ಬಿಹಾರ ವಿಧಾನಸಭೆ ಫೈಟ್: ಸ್ಪಷ್ಟ ಬಹುಮತದತ್ತ ಎನ್ಡಿಎ ದಾಪುಗಾಲು
ಬಿಹಾರದಲ್ಲೂ ಎನ್ಡಿಎ ಈಗಾಗಲೇ ಸ್ಪಷ್ಟ ಬಹುಮತದತ್ತ ದಾಪುಗಾಲು ಇಟ್ಟಿದ್ದು, ಇದರ ಜತೆ ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಮಣಿಪುರ ಹಾಗೂ ಕರ್ನಾಟಕದಲ್ಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಗೆಲುವು ದಾಖಲು ಮಾಡುವ ಮುನ್ಸೂಚನೆ ನೀಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹವಾ ಕುಗ್ಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಗುಜರಾತ್ನಲ್ಲಿ ಕ್ಲೀನ್ ಸ್ವೀಪ್ನತ್ತ ಬಿಜೆಪಿ...8 ಕ್ಷೇತ್ರಗಳಲ್ಲೂ ಮುನ್ನಡೆ!
ಗುಜರಾತ್ನಲ್ಲಿ ಕ್ಲೀನ್ ಸ್ವೀಪ್!?
ಗುಜರಾತ್ನಲ್ಲಿನ 8 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲೂ ಭಾರತೀಯ ಜತನಾ ಪಾರ್ಟಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಹೀಗಾಗಿ ತವರು ನಾಡಿನಲ್ಲಿ ಮೋದಿ ಹವಾ ಮುಂದುವರೆದಿದೆ.
ಮಧ್ಯಪ್ರದೇಶದಲ್ಲೂ ಬಿಜೆಪಿ ಕಿಲಕಿಲ!
28 ಕ್ಷೇತ್ರಗಳ ಮಧ್ಯಪ್ರದೇಶ ವಿಧಾಸಭಾ ಬೈ ಎಲೆಕ್ಷನ್ನಲ್ಲಿ ಭಾರತೀಯ ಜನತಾ ಪಾರ್ಟಿ 17 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಈ ಮೂಲಕ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಸೇಫ್ ಆಗಿದೆ. ಉತ್ತರ ಪ್ರದೇಶದ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಮುನ್ನಡೆಯಲಿದೆ.
ಉಳಿದಂತೆ ಕರ್ನಾಟಕದಲ್ಲಿ ಎರಡು ಕ್ಷೇತ್ರದಲ್ಲಿ, ತೆಲಂಗಾಣ 1 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. 58 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಾರ್ಟಿ 30ಕ್ಕೂ ಅಧಿಕ ಸ್ಥಾನಗಳಲ್ಲಿ ಜಯ ಸಾಧಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮಣಿಪುರದಲ್ಲಿನ 5 ಕ್ಷೇತ್ರಗಳ ಪೈಕಿ ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.