ನಿವಾಡಾ(ಮಧ್ಯಪ್ರದೇಶ): ಇಲ್ಲಿನ ನಿವಾಡಾ ಪ್ರದೇಶದಲ್ಲಿ ಐದು ವರ್ಷದ ಮಗುವೊಂದು ತೆರೆದ ಬೋರ್ವೆಲ್ನಲ್ಲಿ ಬಿದ್ದಿದ್ದು, ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಧ್ಯಪ್ರದೇಶದ ನಿವಾಡಾದಲ್ಲಿ ಈ ಘಟನೆ ನಡೆದಿದ್ದು, ಮಗು ಏಕಾಏಕಿಯಾಗಿ 200 ಅಡಿ ಆಳದ ಬೋರ್ವೆಲ್ನಲ್ಲಿ ಬಿದ್ದಿದೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಬೋರ್ವೆಲ್ ಕಳೆದ ಕೆಲ ದಿನಗಳಿಂದ ಓಪನ್ ಆಗಿತ್ತು ಎಂದು ತಿಳಿದು ಬಂದಿದ್ದು, ಆಟವಾಡಲು ತೆರಳಿದ್ದ ಮಗು ಅದರಲ್ಲಿ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಮಗುವಿನ ಧ್ವನಿ ಕೇಳಿಸುತ್ತಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದು, ಸೇನೆ ಹಾಗೂ ಸ್ಥಳೀಯ ಆಡಳಿತ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಬಾಲಕನನ್ನ ಸುರಕ್ಷಿತವಾಗಿ ರಕ್ಷಿಸುವ ಎಲ್ಲ ಕಾರ್ಯ ಕೈಗೊಳ್ಳಲಾಗಿದೆ ಎಂದಿದ್ದಾರೆ. ಆತನ ಸುರಕ್ಷತೆಗಾಗಿ ನಿವೆಲ್ಲರೂ ಪ್ರಾರ್ಥನೆ ಮಾಡಿ ಎಂದಿದ್ದಾರೆ.