ಭೋಪಾಲ್ (ಮಧ್ಯಪ್ರದೇಶ):ಪತ್ನಿಗೆ ಥಳಿಸಿರುವ ಬಗ್ಗೆ ಹೆಚ್ಚುವರಿ ಮಹಾನಿರ್ದೇಶಕ ಪುರುಷೋತ್ತಮ್ ಶರ್ಮಾ ಅವರಿಂದ ಸ್ಪಷ್ಟನೆ ಪಡೆದ ರಾಜ್ಯ ಗೃಹ ಇಲಾಖೆ, ಅವರನ್ನು ಅಮಾನತು ಮಾಡಿ ಆದೇಶಿಸಿದೆ.
ಎಡಿಜಿ ಪುರುಷೋತ್ತಮ್ ಶರ್ಮಾ ಪತ್ನಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಮಧ್ಯಪ್ರದೇಶ ಸರ್ಕಾರ ಶರ್ಮಾ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಿತ್ತು.
ಪುರುಷೋತ್ತಂ ಶರ್ಮಾ ಅವರು ತನ್ನ ಹೆಂಡತಿಯನ್ನು ಹೊಡೆಯುತ್ತಿದ್ದು, ಇಬ್ಬರು ವ್ಯಕ್ತಿಗಳು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಘಟನೆ ಕುರಿತಂತೆ ತನ್ನನ್ನು ತಾನು ಸಮರ್ಥಿಸಿಕೊಂಡಿರುವ ಅಧಿಕಾರಿ, ಅದನ್ನು 'ಕುಟುಂಬ ವಿವಾದ' ಎಂದಿದ್ದಾರೆ. ನಾನು ಆರೋಪಿಯಾಗಿದ್ದರೆ, ಪತ್ನಿ ದೂರು ನೀಡಬೇಕಾಗಿತ್ತು. ಇದು ಕೌಟುಂಬಿಕ ವಿವಾದ, ಅಪರಾಧವಲ್ಲ. ನಾನು ಹಿಂಸಾತ್ಮಕ ವ್ಯಕ್ತಿ ಅಥವಾ ಅಪರಾಧಿಯಲ್ಲ ಎಂದು ಶರ್ಮಾ ಹೇಳಿದ್ದಾರೆ.
2008ರಲ್ಲಿ ಪತ್ನಿ ನನ್ನ ವಿರುದ್ಧ ದೂರು ನೀಡಿದ್ದರು ಎಂದು ಶರ್ಮಾ ಹೇಳಿದ್ದಾರೆ. 2008ರಿಂದ ಪತ್ನಿ, ನನ್ನ ಮನೆಯಲ್ಲೇ ವಾಸಿಸುತ್ತಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ ಮತ್ತು ನನ್ನ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.