ಜನಗಾಮ ( ತಲಂಗಾಣ) :ಗಂಡ-ಹೆಂಡ್ತಿ ಜಗಳಕ್ಕೆ ಇಬ್ಬರು ಮುದ್ದಾದ ಮಕ್ಕಳು ಬಲಿಯಾಗಿರುವ ಘಟನೆ ಜನಗಾಮ ಜಿಲ್ಲೆಯ ಶಿವಭಿಕ್ಯ ತಾಂಡಾದಲ್ಲಿ ನಡೆದಿದೆ.
ಇಲ್ಲಿನ ಬಾನೋತು ಗೋಪಾಲ್, ರಮ ದಂಪತಿಗೆ ಭಾನುಶ್ರೀ (4) ಮತ್ತು ವರುಣ್ (3) ಮಕ್ಕಳಿದ್ದರು. ರಮಾ ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಪದೇ ಪದೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಖರ್ಚು-ವೆಚ್ಚ ಜಾಸ್ತಿಯಾಗುತ್ತಿರುವುದರಿಂದ ಗಂಡ - ಹೆಂಡ್ತಿ ಮಧ್ಯೆ ಘರ್ಷಣೆ ನಡೆಯುತ್ತಿತ್ತು.
ಆತ್ಮಹತ್ಯೆಗೆ ಯತ್ನಿಸಿದ ತಾಯಿ ರಮ ಸೋಮವಾರ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಕೆಲಸ ನಿಮಿತ್ತ ಗೋಪಾಲ್ ಮನೆಯಿಂದ ಹೊರ ಹೋಗಿದ್ದ. ಸಂಜೆ 5:30ರ ವೇಳೆ ರಮಾ ಕತ್ತಿಯಿಂದ ತನ್ನ ಎರಡು ಮಕ್ಕಳ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಬಳಿಕ ಅದೇ ಕತ್ತಿಯಿಂದ ತನ್ನ ತಲೆಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆ ಮನೆಯ ಅಕ್ಕ- ಪಕ್ಕದವರ ಗಮನಕ್ಕೆ ಬಂದಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರಮಾಳನ್ನು ಜನಗಾಮ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಸ್ಥಿತಿ ಹದಗೆಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವರಂಗಲ್ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ನರ್ಮೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.