ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ದೀಪಾವಳಿ ಹಬ್ಬದ ಮುನ್ನವೇ ಆ ಮನೆಯಲ್ಲಿ ಶೋಕ ಆವರಿಸಿದೆ. ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಮಗುವನ್ನು ಕೊಂದು ಹಂತಕಿಯಾಗಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಚಿಂತಪಲ್ಲಿ ತಾಲೂಕಿನ ವರ್ಕಾಲದ ನಿವಾಸಿ ಅಂತಿರೆಡ್ಡಿ ಶ್ರೀನಿವಾಸ್ರೆಡ್ಡಿ ಹಾಗು ಸುನೀತ ದಂಪತಿಯ ಮಗಳು ಶಿವ ರಾಣಿಯನ್ನು ಆರು ವರ್ಷಗಳ ಹಿಂದೆ ನಾಗರ್ಕರ್ನೂಲ್ ಜಿಲ್ಲೆಯ ಬೆಕ್ಕರ ಗ್ರಾಮದ ಪೋತುಲ ಶಿವಾರೆಡ್ಡಿಗೆ ಕೊಟ್ಟು ಮದುವೆ ಮಾಡಿದ್ದರು. ಶಿವಾರೆಡ್ಡಿ, ಶಿವಾರಾಣಿ ದಂಪತಿಗೆ ಐದು ವರ್ಷದ ಮುದ್ದಾದ ಗಂಡು ಮಗುವಿತ್ತು. ಇಬ್ಬರ ಮಧ್ಯೆ ಮನಸ್ತಾಪಗಳು, ಜಗಳಗಳು ಆಗಿಂದ್ದಾಗ್ಗೆ ನಡೆಯುತ್ತಿದ್ದವು. ಜಗಳ, ಕಲಹಗಳಿಂದ ಬೇಸತ್ತ ಶಿವರಾಣಿ ತನ್ನ ಮಗನೊಂದಿಗೆ ತವರು ಮನೆ ಸೇರಿದ್ದಳು.
ಇನ್ನು ಎಂಟು ತಿಂಗಳನಿಂದಲೂ ಶಿವರಾಣಿ ತಂದೆ-ತಾಯಿ ಹೈದರಾಬಾದ್ನಲ್ಲೇ ವಾಸಿಸುತ್ತಿದ್ದಾರೆ. ಮಗಳಿಗೆ ಐದು ಎಕರೆ ಭೂಮಿಯನ್ನು ಬರೆದುಕೊಟ್ಟಿದ್ದರು. ಆ ಭೂಮಿಯ ವ್ಯವಸಾಯದಿಂದ ಬಂದ ಹಣದ ಮೇಲೆ ಶಿವಾರೆಡ್ಡಿ ಕಣ್ಣು ಹಾಕಿದ್ದ. ಹಣ ನೀಡುವಂತೆ ಶಿವರಾಣಿಗೆ ನಿತ್ಯ ಕಿರುಕುಳ ನೀಡುತ್ತಿದ್ದನು. ದೀಪಾವಳಿಗೆ ಮನೆಗೆ ಬರುವಂತೆ ಶಿವಾರೆಡ್ಡಿ ಹೆಂಡ್ತಿಗೆ ಹೇಳಿದ್ದನು. ಇದಕ್ಕೆ ಶಿವರಾಣಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಶಿವಾರೆಡ್ಡಿ ಮಗುವನ್ನು ಒಪ್ಪಿಸುವಂತೆ ಹೇಳಿದ್ದಾನೆ. ‘ಬೇಕಾದ್ರೆ ಮಗುವನ್ನು ಸಾಯಿಸ್ತಿನಿ, ನಿನಗೆ ಮಾತ್ರ ನೀಡಲ್ಲ’ವೆಂದು ಶಿವರಾಣಿ ಗಂಡನಿಗೆ ಹೇಳಿದ್ದಾಳೆ ಎನ್ನಲಾಗಿದೆ.
ಮಗ ದೂರವಾಗುತ್ತಾನೆ ಎಂಬ ಭಯದಿಂದ ಶಿವರಾಣಿ ಶುಕ್ರವಾರ ರಾತ್ರಿ ಮಗನಿಗೆ ಆ್ಯಸಿಡ್ ಕುಡಿಸಿ ಮಲಗಿಸಿದ್ದಾಳೆ. ಬೆಳಗ್ಗೆ ನೋಡಿದಾಗ ಮಗು ಸಾವನ್ನಪ್ಪಿತ್ತು. ಹೆತ್ತ ಮಗನನ್ನು ಕಳೆದುಕೊಂಡ ದು:ಖದಿಂದ ಆಕೆಯೂ ಆ್ಯಸಿಡ್ ಕುಡಿದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮಗುವಿನ ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಚಿಂತಪಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.