ನವದೆಹಲಿ :ಇಬ್ಬರು ಹೆಣ್ಣು ಮಕ್ಕಳು ಮತ್ತು ತಾಯಿ ರೈಲಿನಡಿಗೆ ಸಿಕ್ಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ಪೂರ್ವ ದೆಹಲಿಯ ಮಾಂಡವಲಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಬದುಕುಳಿದಿದ್ದ ಒಂದುವರೆ ವರ್ಷದ ಪುಟ್ಟ ಕಂದಮ್ಮ ಮೂವರ ಮೃತದೇಹದ ಬಳಿ ಅಳುತ್ತಿದ್ದ ದೃಶ್ಯ ಹೃದಯ ವಿದ್ರಾವಕವಾಗಿತ್ತು.
ಘಟನೆ ನಡೆದ ತಕ್ಷಣ ಧಾವಿಸಿ ಬಂದ ರೈಲ್ವೆ ರೈಲ್ವೆ ಭದ್ರತಾ ದಳದ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ. ಆದರೆ, ದುರಾದೃಷ್ಟಕರ ಸಂಗತಿಯೆಂದರೆ, ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಕಳೆದುಕೊಂಡ ಕಂದಮ್ಮ ಈಗ ಅನಾಥವಾಗಿದೆ.
ಗುರುವಾರ ಮುಂಜಾನೆ 3:40 ರ ಸುಮಾರಿಗೆ ರೈಲ್ವೆ ಟ್ರ್ಯಾಕ್ನಲ್ಲಿ ಮೃತದೇಹಗಳು ಬಿದ್ದಿರುವುದನ್ನು ಗಮನಿಸಿದ ಲೋಕೊ ಪೈಲೆಟ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಆನಂದ್ ವಿಹಾರ್ ರೈಲ್ವೆ ಭದ್ರತಾ ದಳದ ಸಬ್ ಇನ್ಸ್‌ಪೆಕ್ಟರ್ ಟ್ರ್ಯಾಕ್ನಲ್ಲಿದ್ದ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಅಲ್ಲೇ ರಿಂಗಣಿಸುತ್ತಿದ್ದ ಮೃತ ಮಹಿಳೆಯ ಮೊಬೈಲ್ನಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಮಗುವನ್ನು ರಕ್ಷಿಸಿದ ಆರ್ಎಫ್ಎಫ್ ಪೊಲೀಸರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಮಹಿಳೆಯ ವಯಸ್ಸು ಸುಮಾರು 30 ರಿಂದ 35 ಮತ್ತು ಹುಡುಗಿಯರ ವಯಸ್ಸು 6 ವರ್ಷಕ್ಕಿಂತ ಕಡಿಮೆ ಇರಬಹುದೆಂದು ಅಂದಾಜಿಲಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೆ ಭದ್ರತಾ ಪಡೆಯ ಹಿರಿಯ ಡಿಎಸ್‌ಸಿ ಹರೀಶ್ ಸಿಂಗ್ ಪಪೋಲಾ, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಮಗುವನ್ನು ರಕ್ಷಿಸುವುದು ಸ್ವಲ್ಪ ವಿಳಂಬವಾಗಿದ್ದರೂ ಪ್ರಾಣಕ್ಕೆ ಕುತ್ತು ಬರುತ್ತಿತ್ತು ಎಂದು ಹೇಳಿದ್ದಾರೆ.