ಉನ್ನಾವೋ:ನವದೆಹಲಿಯ ಸಫ್ಧರ್ ಜಂಗ್ ಆಸ್ಪತ್ರೆಯಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪಾರ್ಥಿವ ಶರೀರ ಸ್ವಗ್ರಾಮ ತಲುಪಿದೆ.
ಅತ್ಯಾಚಾರಕ್ಕೊಳಗಾದ ಯುವತಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ವೇಳೆ ಅಡ್ಡಗಟ್ಟಿ ಸುಟ್ಟು ಹಾಕಲು ಯತ್ನಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನ ನವದೆಹಲಿಯ ಸಫ್ಧರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶೇ.90ರಷ್ಟು ದೇಹ ಸುಟ್ಟು ಹೋಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಳು.
ನವದೆಹಲಿ ಆಸ್ಪತ್ರೆಯಿಂದ ಯುವತಿಯ ಪಾರ್ಥಿವ ಶರೀರ ಆಕೆಯ ಹುಟ್ಟೂರು ತಲುಪಿದೆ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಮೊದಲು ಆಕೆ ನನ್ನನ್ನ ಬದುಕಿಸಿ ನನಗೆ ಸಾಯಲು ಇಷ್ಟವಿಲ್ಲ, ಅಪರಾಧಿಗಳು ನೇಣುಗಂಬಕ್ಕೇರುವುದನ್ನ ನಾನು ನೋಡಬೇಕು ಎಂದು ನೋವು ತೋಡಿಕೊಂಡಿದ್ದಳು.
ಈಗಾಗಲೆ ಘಟನೆ ಸಂಬಂಧ 5 ಆರೋಪಿಗಳನ್ನ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಕುಟುಂಬಕ್ಕೆ ಯೋಗಿ ಸರ್ಕಾರದಿಂದ ಪರಿಹಾರ:
ಈಗಾಗಲೆ ಉತ್ತರ ಪ್ರದೇಶ ಸರ್ಕಾರ ಸಂತ್ರಸ್ತೆ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಅಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತ್ವರಿತ ನ್ಯಾಯಾಲಯವನ್ನು ರಚಿಸಲು ನಿರ್ಧರಿಸಿದ್ದು, ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಸಹಕಾರಿಯಾಗುತ್ತದೆ ಎಂದಿದ್ದಾರೆ.