ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವಪಕ್ಷ ಸಭೆ ನಡೆಸಿದರು. ಈ ವೇಳೆ, ದೇಶದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ವಿಸ್ತರಣೆ ಕುರಿತು ಮಹತ್ವದ ಮಾಹಿತಿ ಪಡೆದುಕೊಂಡರು.
ದೇಶದಲ್ಲಿ ಹೇರಲಾಗಿರುವ ಲಾಕ್ಡೌನ್ ಏಪ್ರಿಲ್ 14ಕ್ಕೆ ಅಂತ್ಯಗೊಳ್ಳಲಿದ್ದು, ಮುಂದಿನ ಕ್ರಮ ಏನು ಎಂಬುದರ ಕುರಿತು ವಿವಿಧ ಪಕ್ಷದ ಹಿರಿಯ ನಾಯಕರಿಂದ ನಮೋ ಮಾಹಿತಿ ಪಡೆದುಕೊಂಡರು. ಈ ವೇಳೆ, ಶೇ.80ರಷ್ಟು ಮುಖಂಡರು ಲಾಕ್ಡೌನ್ ಮುಂದುವರಿಸುವ ಕುರಿತು ಸಲಹೆ ನೀಡಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
ಲಾಕ್ಡೌನ್ ಮುಂದುವರಿಸುವ ಸುಳಿವು ನೀಡಿದ ನಮೋ: ಏ.11ಕ್ಕೆ ಅಂತಿಮ ನಿರ್ಧಾರ
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬರುತ್ತಿರುವ ಕಾರಣ ಲಾಕ್ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಎಲ್ಲ ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ. ಆದರೆ, ಏಪ್ರಿಲ್ 11ರಂದು ಪ್ರಧಾನಿ ಎಲ್ಲ ರಾಜ್ಯದ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದು, ವಿವಿಧ ರಾಜ್ಯದಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡು ಲಾಕ್ಡೌನ್ ವಿಸ್ತಾರ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.