ನವದೆಹಲಿ:ಇಡೀ ದೇಶ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದೆ. ಡೆಡ್ಲಿ ವೈರಸ್ ಸೃಷ್ಠಿಸಿರುವ ಬಿಕ್ಕಟ್ಟು ಹಾಗೂ ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢವಾಗಿಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗಾಗಿ 20 ಲಕ್ಷ ಕೋಟಿ ರೂ ಮೌಲ್ಯದ ಐತಿಹಾಸಿಕ ವಿಶೇಷ ಪ್ಯಾಕೇಜ್ ಅನ್ನು ನಿನ್ನೆ ರಾತ್ರಿ ಘೋಷಿಸಿದ್ದರು.
ಮೋದಿ ತೆಗೆದುಕೊಂಡಿರುವುದು ಸ್ವಾಗತಾರ್ಹ ಹೆಜ್ಜೆ. ಕೊನೆಗೂ ಭಾರತ ಸರ್ಕಾರ ಅರ್ಥಶಾಸ್ತ್ರಜ್ಞರು, ವ್ಯಾಪಾರಸ್ಥರ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಫೈನಾನ್ಸ್‌ನ ಅರ್ಥಶಾಸ್ತ್ರ ಪ್ರಾಧ್ಯಾಪಕ ಎನ್.ಆರ್.ಭಾನುಮೂರ್ತಿ ಹೇಳಿದ್ದಾರೆ.
ಭಾರತಕ್ಕೆ ಇದರ ಅವಶ್ಯತೆ ಇದೆ. ದೇಶದ ಆರ್ಥಿಕ ಚಟುವಟಿಕೆ ಪುನರುಜ್ಜೀವನಗೊಳ್ಳಬೇಕಾಗಿದ್ದು, ಸ್ವಾವಲಂಬಿ ಭಾರತ ನಿರ್ಮಾಣಗೊಳ್ಳಲಿದೆ ಎಂದಿರುವ ಅವರು, ವಿಶೇಷ ಪ್ಯಾಕೇಜ್ಗೋಸ್ಕರ ಮಾರ್ಗಸೂಚಿ ಅನುಸರಿಸಬೇಕಾದ ಅನಿವಾರ್ಯತೆ ಇದೆ ಅನ್ನೋದು ಅವರ ಮಾತು.
ದೇಶದ ಜನರ ಬಗ್ಗೆ ಕೇಂದ್ರ ಸರ್ಕಾರದ ಉದ್ದೇಶ, ಕಾಳಜಿಯನ್ನು ಪ್ರಶಂಸಿಸುತ್ತೇವೆ. ಆರ್ಥಿಕತೆ ಚೇತರಿಕೆ ಕಾಣಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಪ್ಯಾಕೇಜ್ ಎಲ್ಲ ವಲಯಗಳಿಗೂ ಶಕ್ತಿ ನೀಡಲಿದೆ ಎಂದು ಕೈಗಾರಿಕೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ 10 ರಷ್ಟಿರುವ ಪ್ಯಾಕೇಜ್ನಲ್ಲಿ ರೈತರು, ಕಾರ್ಮಿಕರು, ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಗಳಿಗೆ ನೆರವು ಸಿಗಲಿದೆ. ಇಂದು ಈ ಪ್ಯಾಕೇಜ್ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಲಿದ್ದಾರೆ. ಮಧ್ಯಮ ವರ್ಗದವರಿಗೆ, ಕಾರ್ಮಿಕರಿಗೆ ಹಾಗೂ ಉದ್ಯೋಗದಾತರಿಗೆ ನೆರವು ನೀಡಲಿದ್ದು, ದೇಶಿಯ ವಸ್ತುಗಳ ತಯಾರಿಕೆಗೆ ಹಾಗೂ ಪೂರೈಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದರಿಂದಾಗಿ ದೇಶಿಯ ವಸ್ತುಗಳನ್ನು ಖರೀದಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.