ನವದೆಹಲಿ:ಜೂನ್ ತಿಂಗಳು ಕೊನೆಯಾಗುತ್ತಿದ್ದರೂ ಮುಂಗಾರು ಮಾತ್ರ ಇನ್ನೂ ಸಮರ್ಪಕವಾಗಿ ಕರ್ನಾಟಕ ಸೇರಿದಂತೆ ದೇಶದ ಸಾಕಷ್ಟು ರಾಜ್ಯಗಳನ್ನ ಆವರಿಸಿಲ್ಲ. ಇದು ಸಹಜವಾಗಿಯೇ ಮಾನ್ಸೂನ್ ನಂಬಿರುವ ವರ್ಗವನ್ನು ಆತಂಕಕ್ಕೆ ದೂಡಿದೆ.
ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮಿಸಲಿದೆ ಎಂದಿದ್ದ ಹವಾಮಾನ ಇಲಾಖೆ ಇದೀಗ ಜುಲೈ ತಿಂಗಳಾರಂಭದಿಂದ ಮಳೆ ಚುರುಕುಗೊಳ್ಳಲಿದೆ ಎಂದಿದೆ.
ದಕ್ಷಿಣದ ಕೆಲವು ರಾಜ್ಯ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಲಿನ ತಾಪ ಜೂನ್ ತಿಂಗಳಾಂತ್ಯಕ್ಕೂ ಕಡಿಮೆಯಾಗಿಲ್ಲ. ತಮಿಳುನಾಡಿನಲ್ಲಿ ತೀವ್ರ ನೀರಿನ ಸಮಸ್ಯೆ ತಲೆದೋರಿದ್ದು, ಮಳೆ ಬಂದಲ್ಲಿ ಮಾತ್ರವೇ ಸಮಸ್ಯೆ ನಿವಾರಣೆ ಸಾಧ್ಯ.
ದೇಶದ ಹಲವೆಡೆ ಮಳೆ ದರ್ಶನವಾಗಿದ್ದರೂ ಮಳೆ ಪ್ರಮಾಣ ಕ್ಷೀಣವಾಗಿದೆ. ಕೇರಳಕ್ಕೆ ಒಂದು ವಾರ ತಡವಾಗಿ ಆಗಮಿಸಿದ್ದ ಮುಂಗಾರು ನಂತರದಲ್ಲಿ ನಿಧಾನವಾಗಿ ಇತರ ರಾಜ್ಯಗಳಿಗೆ ಪ್ರವೇಶ ಪಡೆದಿತ್ತು.