ನವದೆಹಲಿ: ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗಲಿದೆ ಎಂದಿದ್ದ ಭಾರತೀಯ ಹವಾಮಾನ ಇಲಾಖೆ ಇದೀಗ ಮುಂದಿನ ಮೂರರಿಂದ ನಾಲ್ಕು ದಿನಗಳೊಳಗಾಗಿ ಮಾನ್ಸೂನ್ ದಕ್ಷಿಣ ಭಾರತಕ್ಕೆ ಆಗಮಿಸಲಿದೆ ಎನ್ನುವ ಮಾಹಿತಿ ನೀಡಿದೆ.
ಜೂನ್ 4ರ ವೇಳೆಗೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಇನ್ನೂ ಸಮರ್ಪಕವಾಗಿ ಬಂದಿಲ್ಲ. ಪರಿಣಾಮ ಜನತೆ ಬಿಸಿಲಿನ ಝಳ ಹಾಗೂ ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.
ಜೂನ್ ಎರಡು ಇಲ್ಲವೇ ಮೂರನೇ ವಾರದಲ್ಲಿ ಬಹುತೇಕ ದೇಶವನ್ನು ವ್ಯಾಪಿಸುತ್ತಿದ್ದ ಮುಂಗಾರು ಇನ್ನೂ ದೇಶದ ಶೇ.10ರಷ್ಟು ಭಾಗದಲ್ಲೂ ಕೃಪೆ ತೋರಿಲ್ಲ. ಇದು ಮಳೆಯನ್ನೇ ನಂಬಿರುವ ರೈತಾಪಿ ವರ್ಗವನ್ನು ಚಿಂತೆಗೀಡು ಮಾಡಿದೆ. ಆದರೆ ಜೂನ್ 20ರ ನಂತರ ಪರಿಸ್ಥಿತಿ ಆಶಾದಾಯಕವಾಗಿರಲಿದೆ ಎಂದು ಹವಾಮಾನ ಇಲಾಖೆ ಭರವಸೆ ನೀಡಿದೆ.
ಮುಂಗಾರು ವಿಳಂಬವಾದ ಪರಿಣಾಮ ಬಿಹಾರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ತಾಪಮಾನ ಏರುಗತಿಯಲ್ಲೇ ಸಾಗುತ್ತಿದೆ. ಮುಂಗಾರು ಪೂರ್ವ ಮಳೆ ಪ್ರಮಾಣ ಕುಂಠಿತವಾಗಿದ್ದು ಕೂಡ ತಾಪಮಾನ ಏರಿಕೆಗೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ.