ನವದೆಹಲಿ:ಮಾನ್ಸೂನ್ ದೇಶದ ಬಹುಭಾಗ ಈಗಾಗಲೇ ಆವರಿಸಿದ್ದು, ಈ ವಾರದಲ್ಲಿ ಪಶ್ಚಿಮ ಭಾರತ ಮತ್ತು ಮಧ್ಯ ಭಾರತದ ಬಹುಭಾಗದಲ್ಲಿ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದಾಗಿ ಮಧ್ಯ ಅರಬ್ಬಿ ಸಮುದ್ರದ ಸಮೀಪದ ಭಾಗಗಳು, ಈಶಾನ್ಯ ಅರಬ್ಬಿ ಸಮುದ್ರಕ್ಕೆ ಒಳಪಡುವ ಭಾಗಗಳು, ಗುಜರಾತ್, ದಾದ್ರಾ ಮತ್ತು ನಗರ ಹವೇಲಿ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳು, ಛತ್ತೀಸ್ಗಢ, ಜಾರ್ಖಂಡ್, ಬಿಹಾರದ ಕೆಲವು ಭಾಗಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳಲ್ಲಿ ವ್ಯಾಪಕವಾದ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಕೊಂಕಣತೀರ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಗುಜರಾತ್ ಮೇಲೆ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂದಿನ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಳ್ಳುವ ಸಾಧ್ಯತೆಯಿದ್ದು, ಮಾನ್ಸೂನ್ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಮೃತ್ಯುಂಜಯ್ ಮೊಹಾಪಾತ್ರ ಸ್ಪಷ್ಟನೆ ನೀಡಿದ್ದಾರೆ.
ಭಾರತದ ಹವಾಮಾನ ಇಲಾಖೆ ಅಂಕಿ - ಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗೆ ಶೇಕಡಾ 31ರಷ್ಟು ಹೆಚ್ಚಿನ ಮಳೆಯಾಗಿದೆ. ನಾಲ್ಕು ಹವಾಮಾನ ವಿಭಾಗಗಳಲ್ಲಿ, ದಕ್ಷಿಣ ಪರ್ಯಾಯ ದ್ವೀಪ ಅಂದರೆ, ಕರ್ನಾಟಕದ ಕೆಲಭಾಗ, ಕೇರಳ, ತಮಿಳುನಾಡಿನಲ್ಲಿನ ಶೇಕಡಾ 20ರಷ್ಟು ಹೆಚ್ಚಿನ ಮಳೆಯಾಗಿದೆ. ಮಧ್ಯ ಭಾರತದಲ್ಲಿ ಶೇಕಡಾ 94ರಷ್ಟು ಹೆಚ್ಚು ಮಳೆ ಮತ್ತು ವಾಯವ್ಯ ಭಾರತದಲ್ಲಿ ಶೇಕಡಾ 19ರಷ್ಟು ಹೆಚ್ಚು ಮಳೆಯಾಗಿದೆ.