ನವದೆಹಲಿ: ಇಂದು (ಜೂನ್1) ಕೇರಳದ ಮೂಲಕ ಭಾರತ ಪ್ರವೇಶಿಸಬೇಕಿದ್ದ ಮಾನ್ಸೂನ್ ಮಾರುತಗಳು, ಜೂನ್ 6ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆ ಕೊಂಚ ಮುಂದಕ್ಕೆ, ಜೂ 6ಕ್ಕೆ ಸಾಧ್ಯತೆ: ಹವಾಮಾನ ಇಲಾಖೆ
ವಾಡಿಕೆಯಂತೆ ಇಂದಿನಿಂದಲೇ (ಜೂನ್ 1) ಕೇರಳಕ್ಕೆ ಮಾನ್ಸೂನ್ ಮಾರುತಗಳ ಆಗಮನವಾಗಬೇಕಿತ್ತು. ಆದರೆ, ಜೂನ್ 6 ರಂದು ಮುಂಗಾರು ಮಳೆ ಶುರುವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ವಾಡಿಕೆಯಂತೆ ಇಂದಿನಿಂದಲೇ ಕೇರಳಕ್ಕೆ ಮಾನ್ಸೂನ್ ಆಗಮನವಾಗಬೇಕಿತ್ತು. ಇದೀಗ ದಕ್ಷಿಣ ಭಾಗದ ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ,ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಹರಡುತ್ತಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಮುಂಗಾರು ಮಾರುತಗಳು ಅರಬ್ಬೀ ಸಮುದ್ರದ ಬಹುತೇಕ ಪ್ರದೇಶಗಳನ್ನು ಪ್ರವೇಶಿಸಿ, ಆ ನಂತರ ಕೇರಳಕ್ಕೆ ಬರಲಿವೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ಎಂ. ಮೊಹಪಾತ್ರ ಹೇಳಿದ್ದಾರೆ.
ಈ ವರ್ಷ ಸಾಮಾನ್ಯ ಮಳೆಯಾಗಲಿದೆ ಎಂದು ನಿನ್ನೆಯಷ್ಟೇ ಹವಾಮಾನ ಇಲಾಖೆ ಹೇಳಿತ್ತು. ವಾಡಿಕೆಯಂತೆ ಮಾನ್ಸೂನ್ ಅವಧಿಯಲ್ಲಿ ಶೇ 70ರಷ್ಟು ಮಳೆಯಾಗಲಿದ್ದು, ಕೃಷಿಗೆ ಇದೇ ಬಹಳ ಮುಖ್ಯವಾದ ಮಳೆಯಾಗಿದೆ. ದೇಶದಾದ್ಯಂತ ಹಲವೆಡೆಗಳಲ್ಲಿ ಬಿಸಿಗಾಳಿ ಬೀಸುತ್ತಿದ್ದು,ಬಹುಪಾಲು ಪ್ರದೇಶಗಳಲ್ಲಿ ಇನ್ನೂ ಮಳೆಗಾಲ ಆರಂಭಗೊಂಡಿಲ್ಲ. ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಹರ್ಯಾಣಗಳಲ್ಲಿ ನಿನ್ನೆ ಅತ್ಯಧಿಕ ತಾಪಮಾನ ದಾಖಲಾಗಿದ್ದು ವರದಿಯಾಗಿತ್ತು.