ನವದೆಹಲಿ: ದೇಶಾದ್ಯಂತ ಮಳೆರಾಯನ ಅಬ್ಬರ ಈ ಬಾರಿ ಹೆಚ್ಚಿರುವ ಪರಿಣಾಮ ಸಾವು-ನೋವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಈ ಬಾರಿಯ ಮಾನ್ಸೂನ್ ಮಳೆಗೆ ದೇಶದ ವಿವಿಧೆಡೆ ಸುಮಾರು 114 ಮಂದಿ ಸಾವನ್ನಪ್ಪಿದ್ದರೆ, ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ದೇಶದಲ್ಲಿ ಕೇರಳ ರಾಜ್ಯ ಮಾನ್ಸೂನ್ ಮಳೆಯಲ್ಲಿ ಹೆಚ್ಚು ಬಾಧಿತ ರಾಜ್ಯವಾಗಿದೆ ಎಂದು ತಿಳಿದು ಬಂದಿದೆ.
ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳ ಕಳೆದ ವರ್ಷ ಮಳೆ ಹಾಗೂ ಪ್ರವಾಹದಿಂದ ಭಾರಿ ನಷ್ಟ ಅನುಭವಿಸಿತ್ತು. ಈ ವರ್ಷವೂ ನೆರೆಯಿಂದ ಮತ್ತೆ ಪೆಟ್ಟು ತಿಂದಿದ್ದು, ಈವರೆಗೆ 57 ಮಂದಿ ಸಾವನಪ್ಪಿದ್ದಾರೆ. ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಮಂದಿ ಮಾನ್ಸೂನ್ ಹೊಡೆತಕ್ಕೆ ಬಲಿಯಾಗಿದ್ದಾರೆ.
ಕೇರಳದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಕಳೆದ 45 ವರ್ಷಗಳಲ್ಲೇ ಕರ್ನಾಟಕ ಕಂಡಿರುವ ಅತಿ ದೊಡ್ಡ ಪ್ರಾಕೃತಿಕ ವಿಕೋಪ ಇದಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಹಾಯಕ್ಕಾಗಿ ಕೇಂದ್ರದ ಮೊರೆ ಹೋಗಿದ್ದಾರೆ. ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಅಲ್ಲೂ ಸಹ 25ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ನಾಲ್ಕು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
ಇನ್ನು ಗಾಂಧಿ ನಾಡು ಗುಜರಾತ್ ಸಹ ಈ ಬಾರಿಯ ಮಾನ್ಸೂನ್ ಮಳೆಗೆ ನಲುಗಿದ್ದು, 19 ಜನ ಈವರೆಗೆ ಸಾವನ್ನಪ್ಪಿದ್ದಾರೆ. ಮಳೆಗಾಲದ ಆರಂಭದಲ್ಲೇ ವಾಯು ಚಂಡಮಾರುತ ಗುಜರಾತ್ಗೆ ದೊಡ್ಡ ಹೊಡೆತ ನೀಡಿತ್ತು.
ವರುಣನ ಅಬ್ಬರಕ್ಕೆ ತತ್ತರಿಸಿದ ಗುಜರಾತ್