ನವದೆಹಲಿ:ದೇಶಾದ್ಯಂತ ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಣೆ ಮಾಡಲಾಗುತ್ತಿದ್ದು, 1998ರ ಮೇ 11ರಂದು ಭಾರತೀಯ ತಂತ್ರಜ್ಞಾನದಲ್ಲಿ ಉಂಟಾದ ಅಪಾರ ಬೆಳವಣಿಗೆ ಪರಿಣಾಮವಾಗಿ ಈ ದಿನ ಆಚರಿಸಲಾಗುತ್ತಿದೆ.
ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೇ.11 ರಾಷ್ಟ್ರೀಯ ತಂತ್ರಜ್ಞಾನ ದಿನ ಘೋಷಣೆ ಮಾಡಿದ್ದು, ಪ್ರತಿವರ್ಷ ಈ ದಿನ ಆಚರಣೆ ಮಾಡಲಾಗುತ್ತಿದೆ. ಈ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ತಂತ್ರಜ್ಞಾನದಲ್ಲಿ ಅಪಾರ ಕೊಡುಗೆ ನೀಡಿರುವ ಎಲ್ಲರಿಗೂ ದೇಶ ಸೆಲ್ಯೂಟ್ ಮಾಡುತ್ತದೆ. 1998ರಂದು ನಮ್ಮ ದೇಶದ ವಿಜ್ಞಾನಿಗಳು ಮಾಡಿರುವ ಸಾಧನೆ ನಿಜಕ್ಕೂ ಹೆಮ್ಮೆ. ಭಾರತೀಯ ಇತಿಹಾಸದಲ್ಲಿ ಇದು ಮೈಲಿಗಲ್ಲು ಎಂದಿರುವ ನಮೋ, ಅಂದಿನ ಪ್ರಧಾನಿ ವಾಜಪೇಯಿ ನಾಯಕತ್ವ ನೆನೆದು ವಿಡಿಯೋ ಶೇರ್ ಮಾಡಿದ್ದಾರೆ.
ತಂತ್ರಜ್ಞಾನದ ಸಹಾಯದಿಂದಲೇ ಕೋವಿಡ್-19 ಸೋಂಕಿತರು ಗುಣಮುಖರಾಗುತ್ತಿದ್ದು, ಅವರಿಗೆ ನಮ್ಮ ಸೆಲ್ಯೂಟ್. ಕೊರೊನಾದಿಂದ ಮುಕ್ತರಾಗಲುಇತಂತ್ರಜ್ಞಾನದಲ್ಲಿ ಅನೇಕ ಪ್ರಯತ್ನ ನಡೆದಿದ್ದು, ಸಂಶೋಧನೆಗಳು ಮುಂಚೂಣಿಯಲ್ಲಿದೆ ಅವರಿಗೆ ನಾನು ವಂದಿಸುತ್ತೇನೆ. ಆರೋಗ್ಯಕರ ಮತ್ತು ಉತ್ತಮ ಜೀವನ ನಡೆಸಲು ತಂತ್ರಜ್ಞಾನ ಬಳಸಿಕೊಳ್ಳುತ್ತೇವೆ ಎಂದಿದ್ದಾರೆ.
ಭಾರತ ಈಗಾಗಲೇ ತಂತ್ರಜ್ಞಾನದಲ್ಲಿ ಅಣ್ವಸ್ತ್ರ ಪರೀಕ್ಷೆ, ಕ್ಷಿಪಣಿ ಉಡಾವಣೆ, ವಿಮಾನಗಳ ನಿರ್ಮಾಣ , ಕೃಷಿ, ನೀರಾವರಿ ಸೇರಿದಂತೆ ಅಪರಿಮಿತ ಸಾಧನೆ ಮಾಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಮತ್ತು ವಿಧಾನಗಳ ಬಳಕೆಯಿಂದಾಗಿ ಭಾರತ ಹಲವಾರು ಸಾಧನೆ ಮಾಡಿದೆ. ಕುಷ್ಟರೋಗ, ಸಿಡುಬು, ಪೋಲಿಯೋಗಳ ನಿವಾರಣೆಯಲ್ಲೂ ಮಲೇರಿಯಾ, ಕಾಲಾ ಅಜರ್, ಕಾಲರಾ ಮತ್ತು ಟಿ.ಬಿ.ಗಳ ನಿಯಂತ್ರಣದಲ್ಲೂ ನಮ್ಮ ದೇಶ ಯಶಸ್ವಿಯಾಗಿದೆ.