ನವದೆಹಲಿ:ಕೊರೊನಾ ವಿಶ್ವದಾದ್ಯಂತ ಹರಡಿರುವ ಈ ವೇಳೆ ನಾವು ನಮ್ಮ ಕೌಶಲ್ಯಗಳನ್ನು ಬಂಡವಾಳ ಮಾಡಿಕೊಂಡು ಅವುಗಳನ್ನು ಜಾಗತಿಕ ಬೇಡಿಕೆಗೆ ತಕ್ಕಂತೆ ಪೂರೈಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವ ಕೌಶಲ್ಯ ದಿನದ ವಾರ್ಷಿಕೋತ್ಸವದ ಅಂಗವಾಗಿ ನವದೆಹಲಿಯ ಡಿಜಿಟಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಸಾಗರೋತ್ತರ ವ್ಯಾಪಾರಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಆ ರಾಷ್ಟ್ರಗಳ ಬೇಡಿಕೆಗಳನ್ನು ನಾವು ಅರಿಯಬೇಕಿದೆ. ಕೊರೊನಾ ಸೋಂಕು ನಮ್ಮ ಕೆಲಸ, ಕಾರ್ಯ ಉದ್ಯೋಗಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಅವುಗಳಿಗೆ ತಕ್ಕಂತೆ ನಾವು ಬದಲಾಗಬೇಕಿದೆ ಎಂದರು.
ಇದೇ ವೇಳೆ ಕೌಶಲ್ಯ, ಮರುಕೌಶಲ್ಯ ಹಾಗೂ ಕೌಶಲ್ಯಾಭಿವೃದ್ಧಿ ಅತ್ಯಂತ ಪ್ರಮುಖವಾಗಿದ್ದು, ರಾಷ್ಟ್ರದ ಯುವ ಜನತೆ ಇದಕ್ಕೆಲ್ಲಾ ಹೊಂದಿಕೊಳ್ಳಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು.
ಜ್ಞಾನ ಮತ್ತು ಕೌಶಲ್ಯದ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿದ ಪ್ರಧಾನಿ ''ಬಹುಪಾಲು ಮಂದಿ ಕೌಶಲ್ಯ ಹಾಗೂ ಜ್ಞಾನದ ಪರಿಕಲ್ಪನೆಗಳ ಬಗ್ಗೆ ಗೊಂದಲದಲ್ಲಿದ್ದಾರೆ. ಸೈಕಲ್ ತುಳಿಯುವುದು ಕೌಶಲ್ಯವಾದರೆ, ಸೈಕಲ್ ತುಳಿಯುವುದು ಹೇಗೆ ಎಂಬುದನ್ನು ಓದಿ ಅಥವಾ ನೋಡಿ ತಿಳಿದುಕೊಳ್ಳುವುದು ಜ್ಞಾನ'' ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಡಿಜಿಟಲ್ ಶೃಂಗಸಭೆಯನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವಾಲಯದಿಂದ ಆಯೋಜಿಸಲಾಗಿತ್ತು. ಈ ದಿನವು ವಿಶ್ವ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ. ಯುವಕರಲ್ಲಿ ಕೌಶಲ್ಯ ಹೆಚ್ಚಿಸುವ ಸಲುವಾಗಿ ಈ ಅಂತಾರಾಷ್ಟ್ರೀಯ ಯುವ ಕೌಶಲ್ಯದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.